ಡಿಜಿಟಲ್ ರೂಪದ ದಾಖಲೆಯಿಂದ ತ್ವರಿತ ಸೇವೆ

BYD MLA
Published on

ಬ್ಯಾಡಗಿ: ತಾಲೂಕಿನ ಎಲ್ಲ ಇಲಾಖೆಗಳು ಒಂದೇ ಮಹಲ್​ನಲ್ಲಿ ಕಾರ್ಯನಿರ್ವಹಿಸುವ ಉದ್ದೇಶದಿಂದ ನೂತನ ತಹಸೀಲ್ದಾರ್ ಕಾರ್ಯಾಲಯದ ಕಟ್ಟಡಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಎಲ್ಲ ಯೋಜನೆಗಳ ಸೌಲಭ್ಯಗಳು ಒಂದೇ ಸಮುಚ್ಚಯದಲ್ಲಿ ದೊರಕಲಿವೆ. ಕಚೇರಿಯ ಎಲ್ಲ ದಾಖಲೆಗಳು ಇನ್ಮುಂದೆ ಇ-ದಾಖಲಾತಿ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಭೂ ಸುರಕ್ಷಾ ಯೋಜನೆಯ ಭೂದಾಖಲೆಗಳ ಇ-ಖಜಾನೆ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.

ಸರ್ಕಾರದ ಎಲ್ಲ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಪೇಪರ್​ಲೆಸ್ ಕಚೇರಿಯನ್ನಾಗಿಸುವ ಮೂಲಕ ಎಲ್ಲ ದಾಖಲಾತಿಗಳು ಇ-ದಾಖಲೆಗಳಾಗಿ ಪರಿವರ್ತನೆಯಾಗಲಿದೆ. ಸಾರ್ವಜನಿಕರಿಗೆ ಕ್ಷಣಾರ್ಧದಲ್ಲಿ ಎಲ್ಲ ಸೌಲಭ್ಯಗಳು ಲಭಿಸಲಿ ಎನ್ನುವ ಉದ್ದೇಶದಿಂದ ಈಗಾಗಲೇ ರಾಜ್ಯಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಡಿಜಿಟಲ್ ರೂಪದಲ್ಲಿ ಬದಲಾದ ದಾಖಲೆಗಳು ತಂತ್ರಜ್ಞಾನದಲ್ಲಿ ಶಾಶ್ವತವಾಗಿರಬೇಕು. ದಾಖಲೆಗಳು ನೇರ, ಸುಲಭವಾಗಿ ಲಭ್ಯವಾಗಬೇಕು. ಹಾಳೆ ಅಥವಾ ರಜಿಸ್ಟರ್​ಗಳ ದಾಖಲಾತಿಗಳಂತೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ, ಅಲ್ಲದೆ, ತ್ವರಿತಸೇವೆ ಒದಗಿಸಲು ಸಾಧ್ಯವಾಗಲಿದೆ. ಇದರಿಂದ ಕಂದಾಯ ಇಲಾಖೆಗೆ ಹೊಸ ಮೆರುಗು ಬಂದಿದ್ದು, ಇನ್ಮುಂದೆ ಸಿಬ್ಬಂದಿಗೆ ದಾಖಲಾತಿ ಕಳೆಯುವುದು, ಹುಡುಕುವುದು ತಪ್ಪಲಿದೆ ಎಂದರು.

ತಹಸೀಲ್ದಾರ್ ಪಿರೋಜ್​ಷಾ ಸೋಮನಕಟ್ಟಿ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರುದ್ರಣ್ಣ ಹೊಂಕಣ, ಮಾರುತಿ ಅಚ್ಚಿಗೇರಿ, ಶಿರಸ್ತೇದಾರ್ ಮಂಜುಳಾ ನಾಯಕ, ನಾಗರಾಜ ಗೂಳೇರ, ಶಶಿಧರಸ್ವಾಮಿ ಹಿರೇಮಠ, ರಂಗಪ್ಪ ಆರ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net