

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪದವೀಧರ ಶಿಕ್ಷಕರ ನೇಮಕಕ್ಕೆ ಎದುರಾಗಿರುವ ನ್ಯಾಯಾಲಯದ ಅಡೆತಡೆಗಳನ್ನು ನಿವಾರಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಈ ಭಾಗದ 4,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, 371ಜೆ ಮೀಸಲಾತಿಗೆ ಸಂಬಂಸಿದಂತೆ ನ್ಯಾಯಾಲಯ ಪ್ರಕರಣ ಇರುವುದರಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.
ಈಗಾಗಲೇ ನ್ಯಾಯಾಲಯದಲ್ಲಿನ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಜತೆಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ಹಾಗೂ ವಿವಿಧ ಇಲಾಖೆಯಲ್ಲಿನ ಸ್ಥಳೀಯ ವೃಂದದ ಹುದ್ದೆಗಳನ್ನು ತುಂಬಲು ನಿರ್ದೇಶನ ನೀಡಲಾಗಿದೆ.
ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗದ ರೈತರು ನೀರಿಗಾಗಿ ನಡೆಸುತ್ತಿರುವ ಹೋರಾಟ ಗಮನಕ್ಕಿದ್ದು, ಈಗಾಗಲೇ ಕೆಳಭಾಗಕ್ಕೆ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ. ಮೂರು ದಿನಗಳಲ್ಲಿ ಗಣೇಕಲ್ ಜಲಾಶಯಕ್ಕೆ 15 ಅಡಿ ನೀರು ತುಂಬಿಸಿದ ನಂತರ ರೈತರಿಗೆ ನೀರು ಕೊಡಲಾಗುವುದು.
ಬರ ಇರುವ ಕಾರಣ ಮೈಸೂರು ದಸರಾ ಬಿಟ್ಟು ಇತರ ಸಂಭ್ರಮಾಚರಣೆ ನಡೆಸಲಾಗುತ್ತಿಲ್ಲ. ಹೀಗಾಗಿ ಜಿಲ್ಲಾ ಉತ್ಸವಕ್ಕೆ ಒತ್ತು ನೀಡಲಾಗುತ್ತಿಲ್ಲ. 2019ರಿಂದ ಭೂಮಿ ಮಾರ್ಗದರ್ಶನ ವೌಲ್ಯ ಹೆಚ್ಚಳವಾಗಿರಲಿಲ್ಲ. ಈಗ ಅದನ್ನು ಶೇ.40ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಜನರಿಗೆ ಹೊರೆಯಾಗುವುದಿಲ್ಲ.
ರಾಯಚೂರು, ಕಲಬುರಗಿ, ಬಳ್ಳಾರಿಯಲ್ಲಿನ ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದದು, ಹೊಸ ಕಟ್ಟಡ ನಿರ್ಮಾಣ ಮಾಡುವುದರ ಜತೆಗೆ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಮುಖಂಡರಾದ ಎ.ವಸಂತಕುಮಾರ, ಕೆ.ಶಾಂತಪ್ಪ, ತಾಯಣ್ಣ ನಾಯಕ ಉಪಸ್ಥಿತರಿದ್ದರು.