ಮಳೆಹಾನಿ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಬಿಬಿಎಂಪಿ ಭರವಸೆ

bbmp office
Published on

ಬೆಂಗಳೂರು: ಮಹಾನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಪ್ರಕಟಿಸಿದರು.

ಕಳೆದ ಶನಿವಾರ ಮಧ್ಯರಾತ್ರಿ ಸುರಿದ ಧಾರಾಕಾರ ವರ್ಷಧಾರೆಯಿಂದಾಗಿ ನೂರಾರು ಮನೆಗಳಿಗೆ ನೀರು ನುಗ್ಗಿ ಭಾರಿ ಅನಾಹುತ ಸಂಭವಿಸಿತ್ತು. ಕೆಲವೆಡೆ ರಾಜಕಾಲುವೆಯಿಂದ ಹರಿದ ನೀರು ಮನೆಗಳಿಗೆ ನುಗ್ಗಿತ್ತು. ಇನ್ನೂ ಕೆಲವೆಡೆ ಮಳೆನೀರು ಚರಂಡಿ ಸಮರ್ಪಕವಾಗಿಲ್ಲದ ಕಾರಣ ಸಮಸ್ಯೆ ಉಂಟಾಗಿ ಜನರು ಸಮಸ್ಯೆಗೊಳಗಾಗಿದ್ದು, ಪರಿಹಾರಕ್ಕಾಗಿ ಮಾಜಿ ಕಾರ್ಪೊರೇಟರ್‌ಗಳು ಒತ್ತಾಯಿಸಿದ್ದರು. ಇದಕ್ಕೆ ಪಾಲಿಕೆಯು ಸ್ಪಂದಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ಹಲವೆಡೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಹಂಪಿನಗರ, ನಂದಿನಿ ಲೇಔಟ್, ಯಲಹಂಕದ ಕೋಡಿ ಬಳಿ ಹೆಚ್ಚು ಸಮಸ್ಯೆಯಾಗಿದೆ. ಪಶ್ಚಿಮ ವಲಯದ ಮಹಾಲಕ್ಷ್ಮೀ ಲೇಔಟ್‌ನಲ್ಲಿ 63 ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದ್ದು, ಇಷ್ಟೂ ಕುಟುಂಬಗಳಿಗೆ ಪ್ರಕೃತಿ ವಿಕೋಪ ಕಾಯ್ದೆಯಡಿ ಪರಿಹಾರವನ್ನು ಪಾಲಿಕೆಯೇ ಭರಿಸಲಿದೆ. ವಲಯ ಆಯುಕ್ತರು ಸಂತ್ರಸ್ತರ ಪಟ್ಟಿ ಮಾಡಿ ಪರಿಹಾರದ ಹಣವನ್ನು ಆಯಾ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಿದ್ದಾರೆ ಎಂದು ತಿಳಿಸಿದರು.

ರಸ್ತೆಗುಂಡಿ ದುರಸ್ತಿಗೆ ಕ್ರಮ:

ಭಾರಿ ಮಳೆಯಿಂದಾಗಿ ಕೆಲವೆಡೆ ರಸ್ತೆಗುಂಡಿಗಳು ಉಂಟಾಗಿವೆ. ಇನ್ನೂ 2-3 ದಿನ ಮಳೆ ಬರುವ ಮುನ್ಸೂಚನೆ ಇದ್ದು, ಕಾದು ಕಾಮಗಾರಿ ಕೈಗೊಳ್ಳಬೇಕಿದೆ. ತೇವಾಂಶ ಇರುವುದರಿಂದ ಗುಂಡಿಗಳಿಗೆ ಕೋಲ್ಡ್ ಮಿಕ್ಸ್ ಹಾಕಿ ದುರಸ್ತಿ ಮಾಡಬೇಕಿದೆ. ಪಾಲಿಕೆಯಿಂದ ನಿತ್ಯ 800 ಗುಂಡಿಗಳನ್ನು ಮುಚ್ಚುತ್ತಿದ್ದರೂ, ಅಷ್ಟೇ ಸಂಖ್ಯೆಯ ಹೊಸ ಗುಂಡಿಗಳು ವರದಿಯಾಗುತ್ತಿವೆ. ಇವುಗಳನ್ನು ಗುರುತಿಸಿ ಸಂಬಂಧಿಸಿದ ಇಂಜಿನಿಯರ್‌ಗಳು ದುರಸ್ತಿ ಹೊಣೆ ವಹಿಸಲಿದ್ದಾರೆ. ಹಿಂದೆ ಗುಂಡಿ ಬಿದ್ದ ಕಡೆ ರಿಪೇರಿ ಆಗಿದ್ದ ಸ್ಥಳದಲ್ಲೇ ಮತ್ತೆ ರಸ್ತೆಗುಂಡಿಗಳು ಉಂಟಾದಲ್ಲಿ ಏತಕ್ಕಾಗಿ ಆ ಸ್ಥಿತಿ ಉದ್ಭವಿಸಿದೆ ಎಂಬ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.

ಇ-ಖಾತಾಗೆ ಆತುರ ಬೇಡ:

ಆಸ್ತಿಯನ್ನು ತಕ್ಷಣವೇ ಮಾರಾಟ ಮಾಡುವವರು ಇ-ಖಾತೆ ಪಡೆದು ತಮ್ಮ ಸ್ವತ್ತನ್ನು ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಪಾಲಿಕೆಯು ಅಗತ್ಯ ಸಹಕಾರ ನೀಡಲಿದೆ. ದಾಖಲೆ ತಾಳೆಗಾಗಿ ಮಾತ್ರ ಇ-ಖಾತೆಯನ್ನು ಈಗಲೇ ಪಡೆಯಲು ಆತುರಪಟ್ಟಲ್ಲಿ ಎಲ್ಲರಿಗೂ ಒಂದಿ ದಿನ ಸೌಲಭ್ಯ ನೀಡಲಾಗದು. ಎಲ್ಲ ನಾಗರಿಕರ ಸ್ವತ್ತುಗಳನ್ನು ಪಾಲಿಕೆಯೇ ಜಿಪಿಎಸ್ ಹಾಗೂ ಇತರ ದಾಖಲೆಯೊಂದಿಗೆ ಪರೀಕ್ಷಿಸಿ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಿದೆ.

- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net