

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಆ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈಗ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಆ ಕುಟುಂಬಕ್ಕೆ ಪರಿಹಾರದ ಚೆಕ್ ದೊರೆಯಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಜತೆಗೂಡಿ ಭೇಟಿಯಾಗಿ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡಬೇಕಿರುವ ಬಗ್ಗೆ ಸಿಎಂ ಗಮನ ಸೆಳೆದವು. ಅವರು ಕೂಡಲೇ ಸ್ಪಂದಿಸಿ 25 ಲಕ್ಷ ರೂ. ಮೊತ್ತದ ಚೆಕ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಂದ್ರಶೇಖರನ್ ಕುಟುಂಬದವರನ್ನು ಬೆಂಗಳೂರಿಗೆ ಕರೆಸಿಕೊಂಡು ಪರಿಹಾರದ ಚೆಕ್ ನೀಡುವುದಾಗಿ ಸಿಎಂ ಹೇಳಿದ್ದಾರೆ. ಆ ಸಂದರ್ಭದಲ್ಲಿ ನನ್ನ ಉಪಸ್ಥಿತಿಯನ್ನೂ ಸಿಎಂ ಬಯಸಿದ್ದಾರೆ. ಚಂದ್ರಶೇಖರನ್ ಪತ್ನಿ ಇಲಾಖೆಯೊಂದರಲ್ಲಿ ಗುತ್ತಿಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಓರ್ವ ಪುತ್ರ ಈಗಾಗಲೇ ವಯಸ್ಕನಾಗಿದ್ದಾನೆ. ಈ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆಯೂ ಸಿಎಂ ಬಳಿ ಮನವಿ ಮಾಡಿದ್ದೇನೆ. ಸಿಎಂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಚನ್ನಬಸಪ್ಪ ತಿಳಿಸಿದರು.