

ಅವಿನಾಶ್ ಜೈನಹಳ್ಳಿ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಹೆಚ್ಚಿಸುವ ‘ಗಜಪಯಣ’ದ ದಿನಾಂಕ ಶೀಘ್ರದಲ್ಲಿಯೇ ಫಿಕ್ಸ್ ಆಗಲಿದೆ. ಪುರೋಹಿತರ ಮಾರ್ಗದರ್ಶನದ ಪ್ರಕಾರ ಅರಮನೆ ಮಂಡಳಿ ಗಜಪಯಣಕ್ಕೆ ಆಗಸ್ಟ್ ಎರಡನೇ ವಾರದಲ್ಲಿ ಎರಡು ಮುಹೂರ್ತ ಗೊತ್ತು ಮಾಡಿದ್ದು, ಅದನ್ನು ಜಿಲ್ಲಾಡಳಿತಕ್ಕೆ ನೀಡಲಿದೆ.
ಅಕ್ಟೋಬರ್ 5ರಂದು ವಿಜಯದಶಮಿ ನಡೆಯಲಿದೆ. ಅಂತೆಯೆ, ಈ ಬಾರಿಯು ಜಂಬೂಸವಾರಿ ನಡೆಯುವ ಎರಡು ತಿಂಗಳ ಮೊದಲೇ ಗಜಪಡೆ ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡಲಿವೆ. ಗಜಪಯಣ ಕುರಿತು ಈಗಾಗಲೇ ಜಿಲ್ಲಾಡಳಿತ ಕೆಲ ಸಭೆ ನಡೆಸಿದೆ. ಜತೆಗೆ, ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿ ಒಂದು ದಿನವನ್ನು ಅಂತಿಮಗೊಳಿಸಲಿದ್ದಾರೆ. ಸೋಮವಾರ ಅಥವಾ ಮಂಗಳವಾರ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಿ ಒಂದು ದಿನಾಂಕವನ್ನು ಅಧಿಕೃತಗೊಳಿಸಲಿದ್ದಾರೆ.
ಕರೊನಾ ಸೋಂಕಿನಿಂದ ಎರಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಹಾಗಾಗಿ, ಜು. 19 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ (ಹೈಪವರ್ ಕಮಿಟಿ) ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಅರಮನೆ ಮಂಡಳಿಯು, ಪುರೋಹಿತರು ಗೊತ್ತು ಮಾಡಿರುವ ಮುಹೂರ್ತದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಿದೆ.
20 ಆನೆಗಳ ಪಟ್ಟಿ ಸಿದ್ಧ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಗಜಪಡೆಯನ್ನು ಕರೆತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಡಿಸಿಎಫ್ ಕರಿಕಾಳನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿಗೋಡು, ದುಬಾರೆ, ರಾಮಪುರ ಸೇರಿದಂತೆ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಆನೆ ಶಿಬಿರಗಳಿಗೆ ತೆರಳಿ ಎಲ್ಲ ಆನೆಗಳ ಆರೋಗ್ಯ, ಅವುಗಳ ಸಾಮರ್ಥ್ಯ ಮತ್ತು ಸ್ವಭಾವವನ್ನು ಪರೀಕ್ಷಿಸಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿ ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಈ ಪೈಕಿ 4 ರಿಂದ 5 ಹೊಸ ಆನೆಗಳು ಬರುವುದು ಈ ಬಾರಿಯ ವಿಶೇಷವಾಗಿದೆ.
ಸಕಲ ಸಿದ್ಧತೆ: ಗಜಪಯಣಕ್ಕೆ ಮತ್ತು ಅರಮನೆ ಅಂಗಳದಲ್ಲಿ ಗಜಪಡೆಯ ವಾಸ್ತವ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಆನೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಟೆಂಟ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿಯೂ ಮಾವುತರ ಮತ್ತು ಕಾವಾಡಿಗಳ ಮಕ್ಕಳಿಗಾಗಿ ‘ಟೆಂಟ್ ಶಾಲೆ’ ನಡೆಸಲಾಗುತ್ತದೆ. ಆನೆಗಳಿಗೆ ಹಸಿರು ಮೇವಿನೊಂದಿಗೆ ಪ್ರತಿದಿನವೂ ಹೆಸರು ಕಾಳು, ಉದ್ದು, ಗೋಧಿ, ಕುಸುಬಲಅಕ್ಕಿ ಮತ್ತು ರಾಗಿ ಬೆರೆಸಿದ ಮುದ್ದೆಯನ್ನು ನೀಡಲು ನಿರ್ಧರಿಸಲಾಗಿದೆ.
20ರ ಪಟ್ಟಿಯಲ್ಲಿ ‘ಅಶ್ವತ್ಥಾಮ’ ! ಹಾಸನ ಜಿಲ್ಲೆಯ ಗ್ರಾಮಗಳಲ್ಲಿ ಪುಂಡಾಟ ಮೆರೆದು ಸೆರೆ ಸಿಕ್ಕ ನಾಲ್ಕೇ ವರ್ಷದಲ್ಲಿ ದಸರಾ ಮಹೋತ್ಸವದಲ್ಲಿ(ಕಳೆದ ವರ್ಷ) ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದ ‘ಅಶ್ವತ್ಥಾಮ’ ಆನೆ ಈ ಬಾರಿ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಎರಡನೇ ಬಾರಿಗೆ ದಸರಾಕ್ಕೆ ಆಗಮಿಸುವ ನಿರೀಕ್ಷೆಯಲ್ಲಿದ್ದಾನೆ.
35 ವರ್ಷದ ಅಶ್ವತ್ಥಾಮ 2.85 ಮೀಟರ್ ಎತ್ತರ, 3.46 ಮೀಟರ್ ಶರೀರದ ಉದ್ದ ಹೊಂದಿದ್ದಾನೆ. 3,630 ಕೆ.ಜಿ. ತೂಕವಿದ್ದು, ಸಮತಟ್ಟಾದ ಬೆನ್ನು ಹೊಂದಿರುವ ಈ ಗಂಡಾನೆ ಭವಿಷ್ಯದ ಅಂಬಾರಿ ಆನೆಯಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಇವೆ. ಈ ಹಿನ್ನೆಲೆಯಲ್ಲಿ ಮುಂದಿನ 5-8 ವರ್ಷ ದಸರಾ ಮಹೋತ್ಸವದಲ್ಲಿ ಕರೆತಂದು ತರಬೇತಿ ನೀಡಿದರೆ, 15 ವರ್ಷದ ನಂತರ ಅಂಬಾರಿ ಹೊರಲು ಅಶ್ವತ್ಥಾಮನನ್ನು ಸಜ್ಜುಗೊಳಿಸಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆಯದ್ದಾಗಿದೆ. ಅಶ್ವತ್ಥಾಮನ ಜತೆಗೆ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಗೋಪಾಲಸ್ವಾಮಿ , ದುಬಾರೆ ಕ್ಯಾಂಪ್‌ನಿಂದ ಕಾವೇರಿ, ವಿಕ್ರಮ , ಧನಂಜಯ, ರಾಂಪುರ ಕ್ಯಾಂಪ್‌ನಲ್ಲಿರುವ ಲಕ್ಷ್ಮೀ , ಚೈತ್ರ ಕೂಡ 20ರ ಪಟ್ಟಿಯಲ್ಲಿವೆ.
ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಆನೆ ಶಿಬಿರಗಳಿಗೆ ತೆರಳಿ ಎಲ್ಲ ಆನೆಗಳ ಆರೋಗ್ಯ, ಅವುಗಳ ಸಾಮರ್ಥ್ಯ ಮತ್ತು ಸ್ವಭಾವವನ್ನು ಪರೀಕ್ಷಿಸಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಗಜಪಯಣ ಸಂಬಂಧ ಪುರೋಹಿತುರು ನೀಡಿರುವ ದಿನಾಂಕಗಳನ್ನು ಅರಮನೆ ಮಂಡಳಿಯು ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಿದೆ. ಅರಣ್ಯ ಇಲಾಖೆಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಡಾ.ವಿ.ಕರಿಕಾಳನ್, ಡಿಸಿಎಫ್