ಡಿಸಿ, ಎಸ್ಪಿಗೆ ಶೀಘ್ರ ಗೇಟ್‌ಪಾಸ್? ; ಆಡಳಿತ ಚುರುಕಾಗಿಸಲು ಸಿದ್ಧತೆ ; ಚಿ.ನಾ.ಹಳ್ಳಿಗೆ ಸೀಮಿತವಾದ ಮಾಧುಸ್ವಾಮಿ ; ಪ್ರಬಲ ವಿರೋಧ ಪಕ್ಷದ ಕೊರತೆ

dc office 3
Published on

ತುಮಕೂರು: ಸಾಕಷ್ಟು ನಿರೀಕ್ಷೆಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕಾಲಕಾಲಕ್ಕೆ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆಯಾದರೂ ಜನರ ನಿರೀಕ್ಷೆಯ ಮಟ್ಟಿಗೆ ಜಿಲ್ಲಾಡಳಿತ ಸುಧಾರಣೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಚಿವರ ಕಾರ್ಯವೈಖರಿಗೆ ಅಧಿಕಾರಿಗಳು ಬಗ್ಗದಿರುವುದೇ ಜಿಲ್ಲೆಯಲ್ಲಿ ಆಡಳಿತ ಕುಸಿಯಲು ಕಾರಣ ಎನ್ನಲಾಗಿದೆ.

ಮಾಧುಸ್ವಾಮಿ ಸಚಿವರಾದ ನಂತರ ಮೂರು ಕೆಡಿಸಿ ಸಭೆ ನಡೆಸಿದ್ದು, ಜ.7ರಂದು ನಾಲ್ಕನೇ ಸಭೆ ನಡೆಸುತ್ತಿದ್ದಾರೆ. ಕರೊನಾ, ವಿವಿಧ ಚುನಾವಣಾ ನೀತಿ ಸಂಹಿತೆ ಹೊರತಾಗಿ ಸಕಾಲಕ್ಕೆ ಸರಿಯಾಗಿ ಸಭೆ ನಡೆಸುತ್ತಿರುವ ಹೆಗ್ಗಳಿಕೆಯಿದೆ. ಜೆ.ಸಿ.ಮಾಧುಸ್ವಾಮಿ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟಿಸುತ್ತಿದ್ದ ಅಬ್ಬರವೀಗ ಸಂಪೂರ್ಣ ಮರೆಯಾಗಿದೆ. ವಿರೋಧ ಪಕ್ಷಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿವೆ.

ಸರ್ಕಾರ ಬದಲಾಗಿದ್ದರೂ ಜಿಲ್ಲೆಯಲ್ಲಿ ಯಾವ ಅಧಿಕಾರಿಯೂ ಬದಲಾಗಲಿಲ್ಲ, ಸಚಿವರು ಕೈ ಶುದ್ಧವಾಗಿಟ್ಟುಕೊಂಡರೂ ಅಧಿಕಾರಿಗಳನ್ನು ನಂಬಿ ಮುಂದುವರಿಸಿದ ಕಾರಣಕ್ಕೆ ಹಿಂದಿದ್ದ ಭ್ರಷ್ಟಾಚಾರವೇನು ಕಡಿಮೆಯಾಗಲೇ ಇಲ್ಲ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೆಲಸಗಳನ್ನಷ್ಟೇ ಚುರುಕಾಗಿ ಮುಗಿಸಿ ಸಚಿವರ ವಿಶ್ವಾಸ ಗಿಟ್ಟಿಸಿಕೊಂಡ ಅಧಿಕಾರಿಗಳು ಉಳಿದ ತಾಲೂಕುಗಳನ್ನು ಕಡೆಗಣಿಸಿರುವುದು ಅಂಕಿ-ಅಂಶಗಳಲ್ಲಿಯೇ ದೃಢವಾಗಿದೆ.

ಡಾ.ಜಿ.ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವಿರೋಧ ಪಕ್ಷದಲ್ಲಿದ್ದ ಮಾಧುಸ್ವಾಮಿ, ನೀವೇನು ಕೊರಟಗೆರೆಗೆ ಸಚಿವರೊ ಅಥವಾ ಜಿಲ್ಲೆಗೊ ಎಂದು ಆರ್ಭಟಿಸಿದ್ದರು. ಬದಲಾದ ಕಾಲದಲ್ಲಿ ಮಾಧುಸ್ವಾಮಿ ಅವರೇ ಸಚಿವರಾದರೂ ಅದೃಷ್ಟ ಖುಲಾಯಿಸಿದ್ದು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಮಾತ್ರ.

ಕಳೆದೊಂದು ವರ್ಷದಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹರಿದುಬಂದಿದೆ. ಬರದ ಸೀಮೆಯಲ್ಲಿ ಹೇಮಾವತಿ ಹರಿಯುತ್ತಿದ್ದಾಳೆ. ಸಾಕಷ್ಟು ವರ್ಷದಿಂದ ಅನುದಾನವಿಲ್ಲದೆ ಸೊರಗಿರುವ ಸ್ವಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದಿದ್ದು ಸ್ವಾಭಾವಿಕವೇ ಆಗಿದೆ. ಆದರೆ, ಉಳಿದೆಲ್ಲ ಶಾಸಕರು ತಮಗೆ ಅನುದಾನ ಕಡಿಮೆಯಾಗಿದ್ದರೂ ಬಾಯಿಬಿಟ್ಟು ಕೇಳದಿರುವುದು ಆಶ್ಚರ್ಯ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 2.49 ಲಕ್ಷ ರೈತರಿಗೆ 3ನೇ ತ್ರೈಮಾಸಿಕದಲ್ಲಿ ಮೊತ್ತ ಪಾವತಿ ಬಾಕಿಯಿದೆ. ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿಯೇ ಸಾಕಷ್ಟು ಬಿಲ್ ಬಾಕಿ ಉಳಿದಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಚೇರಿ ಬಿಟ್ಟು ಹೊರಹೋಗಿದ್ದೇ ಕಡಿಮೆಯಿದ್ದರೂ ಹಣ ಖರ್ಚಾಗುತ್ತಿದೆ. ಮೀನುಗಾರಿಕೆ ಸೇರಿ ವಿವಿಧ ಇಲಾಖೆಗಳಲ್ಲಿ ದುಂದು ವೆಚ್ಚದ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದರೂ ಜಿಪಂ ಸಿಇಒ ಮೌನಿಯಾಗಿದ್ದಾರೆ.

ಜಿಲ್ಲೆಯಿಂದ ಅಧಿಕಾರಿಗಳಿಗೆ ಗೇಟ್‌ಪಾಸ್?: ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರವೂ ಯಾವೊಬ್ಬ ಅಧಿಕಾರಿಯನ್ನು ಹೊರಗೆ ಕಳುಹಿಸಲಿಲ್ಲ. ವರ್ಗಾವಣೆಗೆ ಶಿಾರಸು ಪತ್ರ ಕೊಟ್ಟ ಉದಾಹರಣೆಗಳೂ ಇಲ್ಲ. ಆದರೆ, ಸಚಿವರು ತೋರಿದ ಉದಾರತನವನ್ನು ಅಧಿಕಾರಿಗಳು ಉಳಿಸಿಕೊಂಡಿಲ್ಲ ಎಂಬ ಆಕ್ಷೇಪ ಸ್ವಪಕ್ಷದಲ್ಲಿಯೇ ಹೆಚ್ಚಾಗಿದೆ.

ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನಗೊಂಡಿರುವ ಸಚಿವರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಹಾಗೂ ಜಿಪಂ ಸಿಇಒ ಶುಭಾಕಲ್ಯಾಣ್ ಅವರಿಗೆ ಬಿಸಿ ಮುಟ್ಟಿಸಲಿದ್ದಾರೆ ಎಂಬ ಮಾತಿದೆ. ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ವರ್ಗಾವಣೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net