ವಿವಿಧ ವಿದ್ಯುತ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಡಿಸಿ

31adarshkdga5
Published on

ಮಡಿಕೇರಿ: ಮಡಿಕೇರಿ-ವಿರಾಜಪೇಟೆ ಮಾರ್ಗ, ಸುಂಟಿಕೊಪ್ಪ-ಸೋಮವಾರಪೇಟೆ, ಪೊನ್ನಂಪೇಟೆ-ಶ್ರೀಮಂಗಲ ಮಾರ್ಗದಲ್ಲಿ ೬೬ ಕೆ.ವಿ. ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಿಸಲಾಗುತ್ತಿದ್ದು, ಈ ಸಂಬಂಧ ಬಾಕಿ ಇರುವ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.


ಜಿಲ್ಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವತಿಯಿಂದ ಈಗಾಗಲೇ ೬೬ ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.


ವಿದ್ಯುತ್ ಮಾರ್ಗ ಹಾದು ಹೋಗುವ ಭೂಮಿಯ ಮಾಲೀಕರಿಗೆ ಸರ್ಕಾರದ ನಿಯಮದಂತೆ ಪರಿಹಾರ ಒದಗಿಸಲಾಗುವುದು. ಮಾದಾಪುರ, ಮುಕ್ಕೋಡ್ಲು, ಗರ್ವಾಲೆ, ಸೂರ್ಲಬ್ಬಿ ಮತ್ತಿತರ ಕಡೆಗಳಲ್ಲಿ ವಿದ್ಯುತ್ ಕಲ್ಪಿಸಬೇಕು. ವಿದ್ಯುತ್ ಸಂಪರ್ಕ ಅತ್ಯಗತ್ಯವಾಗಿ ಬೇಕಿರುವಲ್ಲಿ ೬೬ ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.


ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಮಾದೇಶ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮೂರು ಪ್ರಮುಖ ವಿದ್ಯುತ್ ಯೋಜನೆಗಳಲ್ಲಿ ಸುಂಟಿಕೊಪ್ಪ-ಸೋಮವಾರಪೇಟೆ ಹಾದು ಹೋಗುವ ಮಾರ್ಗದಲ್ಲಿ ಶೇ.೭೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹಾನಗಲ್ಲು-ಶೆಟ್ಟಳ್ಳಿ, ಹಾಗೆಯೇ ಐಗೂರು, ಕಿರಗಂದೂರಿನಲ್ಲಿ ಸರ್ವೆ ಕಾರ್ಯ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.


ಮರ ಕಟಾವು ಅಥವಾ ತೆರವು ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಲಾಗುವುದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಭೂ ಮಾಲೀಕರು ಭೂಮಿಯ ಆರ್‌ಟಿಸಿ ಒದಗಿಸಿದಲ್ಲಿ ಸಣ್ಣಪುಟ್ಟ ಮರಗಳನ್ನು ಭೂಮಾಲೀಕರಿಗೆ ನೀಡಬಹುದಾಗಿದೆ ಎಂದರು.


ಸಭೆಯಲ್ಲಿ ಮಡಿಕೇರಿ ಶಾಸಕರು, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ವಿದ್ಯುತ್ ಇಲಾಖೆಯ ಮುಖ್ಯ ಎಂಜಿನಿಯರ್ ಅನುರಾಗ್, ಅಧೀಕ್ಷಕ ಎಂಜಿನಿಯರ್ ರಮೇಶ್, ಎಇಇ ಸಂದೇಶ್, ಸೆಸ್ಕ್ ಇಇ ಅನಿತಾ ಬಾಯಿ, ಡಿಸಿಎಫ್ ಶರಣ ಬಸಪ್ಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net