

ಹೊನ್ನಾಳಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಕ್ರಿಯಾಶೀಲ ವ್ಯಕ್ತಿಯನ್ನು ನೂತನ ಅಧ್ಯಕ್ಷರಾಗಿ ಶೀಘ್ರ ನೇಮಕ ಮಾಡಬೇಕು ಎಂದು ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಉಮಾಕಾಂತ್ ಜೋಯಿಸ್ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಕೋಟೆ ದಿಡ್ಡಿ ಆಂಜನೇಯ ಸಂಸ್ಕೃತ ಪಾಠಶಾಲೆಯಲ್ಲಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಹವ್ಯಕ ಬಡ ಬ್ರಾಹ್ಮಣರಿಗೆ ಅನುಕೂಲ ಆಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನೇಕ ಉಪಯುಕ್ತ ಯೋಜನೆಗಳನ್ನು ತರಲಾಗಿತ್ತು. ಕಾಂಗ್ರೆಸ್ ಸರ್ಕಾರ ಕೂಡ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜುಲೈನಲ್ಲಿ ನಡೆಯುವ ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಆ ಮುಖಾಂತರ ಬಡ ಬ್ರಾಹ್ಮಣರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ಇದರಿಂದ ಆರ್ಥಿಕವಾಗಿ ಮುಂದುವರಿಯಲು ವಿವಿಧ ಉದ್ಯಮ ಸ್ಥಾಪಿಸಲಿಕ್ಕೆ ಅವಕಾಶ ಸಿಕ್ಕಂತಾಗುತ್ತದೆ ಎಂದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎನ್. ಜಯರಾವ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಮಿತಿಯ ನೂತನ ಸದಸ್ಯ ಉಮಾಕಾಂತ್ ಜೋಯಿಸ್, ಗುತ್ತಿಗೆದಾರ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಬಸವಾಪಟ್ಟಣದ ಚಿದಂಬರ ದೀಕ್ಷಿತ್, ಕುಂದೂರಿನ ರಂಗನಾಥ್‌ರಾವ್ ಮಾತನಾಡಿದರು.
ರಾಘವೇಂದ್ರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀನಿವಾಸ್‌ಮೂರ್ತಿ, ವಿಜಯಕುಮಾರ್, ಮೋಹನ್‌ಕುಮಾರ್, ಸತ್ಯನಾರಾಯಣ್‌ರಾವ್, ಚಿದಂಬರಭಟ್, ಗುರುದತ್, ಹಿರಿಯ ವಕೀಲ ಎಸ್.ಎಸ್. ಪ್ರಕಾಶ್, ಲಲಿತ ಭಾರ್ಗವ, ಕುಮಾರಸ್ವಾಮಿ ಉಪಸ್ಥಿತರಿದ್ದರು.