ಮರಾಠಾ ಪೀಠ ಸ್ಥಾಪನೆಗೆ ಶೀಘ್ರ ಕ್ರಮ

24 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮರಾಠಾ ಸಮುದಾಯಕ್ಕೆ 13 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪೀಠ ಸ್ಥಾಪನೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಮಾಜದ ಅಭಿವೃದ್ಧಿಗೆ ಆಯಾ ಸಮಜದ ಪೀಠ ಮುಖ್ಯ. ಈ ದಿಸೆಯಲ್ಲಿ ಮರಾಠಾ ಸಮಾಜದ ಎಲ್ಲರೂ ಒಟ್ಟಾಗಿ ಕಾರ್ಯ ಪ್ರಾರಂಭಿಸಿ. ಮುಂದಿನ ದಿನಗಳಲ್ಲಿ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್​.ಕೆ. ಪಾಟೀಲ ಭರವಸೆ ನೀಡಿದರು.

ನಗರದ ದೊಡ್ಡನಾಯಕನಕೊಪ್ಪದಲ್ಲಿ ಶಹರ ಮರಾಠಾ ಸಮಾಜದ ವತಿಯಿಂದ ನಿರ್ಮಿಸಿರುವ ಮರಾಠಾ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮರಾಠಾ ಸಮಾಜದ ಅಭಿವೃದ್ಧಿ ಮತ್ತು ಒಗ್ಗಟ್ಟಿಗೆ ಪ್ರತಾಪ ಚವ್ಹಾಣ ಅವರೊಂದಿಗೆ ಎಲ್ಲರೂ ಕೈಜೋಡಿಸಿ ಶ್ರಮಿಸುತ್ತಿರುವುದು ಸ್ವಾಗತಾರ್ಹ. ಇದೇ ರೀತಿ ಸಮಾಜದ ಅಭಿವೃದ್ಧಿ ಮುಂದುವರೆಯಲಿ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿತ್ತು. ಇದರಿಂದ ಸಮಾಜದ ಅಭಿವೃದ್ಧಿಗೆ, ಭವನ ನಿರ್ಮಾಣವೂ ಕಷ್ಟವಾಗಿತ್ತು. ಇಂದು ಮರಾಠಾ ಸಮುದಾಯದ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಮರಾಠರು ಒಗ್ಗಟ್ಟಾಗಿ ಶ್ರಮಿಸಿದರೆ ಸಮಾಜವೂ ಅಭಿವೃದ್ಧಿಯಾಗಲಿದೆ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಒಂದು ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಇರಲಿದೆ. ಆದರೆ ಮರಾಠಾ ಭವನ ನಿರ್ಮಾಣಕ್ಕೆ ಸಮಾಜ ಮತ್ತು ಸರ್ಕಾರ ಕೈ ಜೋಡಿಸಿದ್ದು ಉತ್ತಮ ಕೆಲಸ. ಸಮಾಜಕ್ಕೆ ಅಗತ್ಯ ಸಹಕಾರ ನೀಡುತ್ತಲೇ ಬಂದಿದ್ದು, ಮುಂದಿನ ದಿನಗಳಲ್ಲೂ ಸಹಕಾರ ನೀಡಲಾಗುವುದು. ನಿಮ್ಮ ಸಹಾಯಕ್ಕೆ ನಾವೆಲ್ಲರೂ ಸದಾ ಇರುತ್ತೇವೆ ಎಂದು ಭರವಸೆ ನೀಡಿದರು.

ಸಮಾಜದ ಅಧ್ಯಕ್ಷ ಪ್ರತಾಪ ಚವ್ಹಾಣ ಮಾತನಾಡಿ, ಸಚಿವ ಎಚ್​.ಕೆ. ಪಾಟೀಲ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಎನ್​.ಎಚ್​. ಕೋನರಡ್ಡಿ ಸೇರಿ ಇತರ ಶಾಸಕರ ಸಹಕಾರದಿಂದ ಸಮಾಜಕ್ಕೆ ಇಷ್ಟು ದೊಡ್ಡ ಕೊಡುಗೆ ಸಿಕ್ಕಿದೆ. ಸಮಾಜದ ಬಾಂಧವರೂ ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ. ಇದಕ್ಕೆ ನಾನು ಸದಾ ಚಿರರುಣಿ. ಇದೇ ರೀತಿ ಸಮಾಜಕ್ಕೆ ಒಂದು ಪೀಠ ಸ್ಥಾಪಿಸಿ ಅದಕ್ಕೆ 2 ಎಕರೆ ಜಾಗೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಎನ್​.ಎಚ್​. ಕೋನರಡ್ಡಿ, ಹುಡಾ ಅಧ್ಯಕ್ಷ ಶಾಕೀರ ಸನದಿ ಮಾತನಾಡಿದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಡಿ.ಆರ್​. ಪಾಟೀಲ, ಶಶಿಧರ ತೋಡಕರ, ಬಾಪುಗೌಡ ಪಾಟೀಲ, ಪಾಪು ಧಾರೆ, ಮಾರ್ತಾಂಡ ಜಾಧವ, ಮಿಲಿಂದ ಪವಾರ, ಶಿವಾಜಿ ನಿಂಬಾಳಕರ, ಶಿವು ರಡ್ಡಿ, ಅಮಿತ ಚವ್ಹಾಣ, ಸಿ.ಎನ್​. ಪವಾರ, ಎಂ.ಎನ್​. ಪವಾರ, ಸುನೀಲ ಪಾಟೀಲ, ರವಿ ಶಿಂಧೆ, ಉದಯ ಕಾಳೆ, ಶುಭಾಂಗಿ ಮೋರೆ, ಕಾಜಲ ಪವಾರ, ಸಂಗೀತಾ ಪವಾರ, ರಶ್ಮಿ ಚಾಂದಗುಡೆ, ಗಾಯತ್ರಿ ಚವ್ಹಾಣ, ಅರುಣ ಪವಾರ, ಸುಧಾ ಚಾಂದಗುಡೆ, ವಿಮಲಾ ಜಾಧವ, ಪ್ರೇಮಾ ಕಾಳೆ, ರೇಣುಕಾ ಕೋಟಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net