ಪ್ರವಾಸಿ ತಾಣಗಳ ಅಭಿವೃದ್ಧಿಗೆ ಶೀಘ್ರ ಕ್ರಿಯಾಯೋಜನೆ

MANOJKUMAR
Published on

ಲಕ್ಷ್ಮೇಶ್ವರ: ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಐತಿಹಾಸಿಕ, ಧಾರ್ಮಿಕ ಮತ್ತು ನೈಸರ್ಗಿಕವಾಗಿ ವಿಶೇಷತೆ ಹೊಂದಿರುವ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಶೀಘ್ರವೇ ಕ್ರಿಯಾಯೋಜನೆ ರೂಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮನ್ವಯ ಸಮಿತಿ ಅಧ್ಯಕ್ಷ ಮನೋಜಕುಮಾರ ಹೇಳಿದರು.

ಲಕ್ಷ್ಮೇಶ್ವರದ ಶ್ರೀಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರ ಮತ್ತು ಶೆಟ್ಟಿಕೆರಿ ನೈಸರ್ಗಿಕ ಪ್ರದೇಶವನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದೆ. ಶ್ರೀಸೋಮೇಶ್ವರ ದೇವಸ್ಥಾನ ಅತ್ಯಂತ ಪ್ರೇಕ್ಷಣೀಯ ಕ್ಷೇತ್ರವಾಗಿದೆ. ಮುಖ್ಯ ದೇವಸ್ಥಾನ, ಉತ್ತರ ದ್ವಾರ, ಕಲ್ಯಾಣಿ, ಕಾಂಪೌಂಡ್ ಅಭಿವೃದ್ಧಿಗೊಳ್ಳಬೇಕಿದೆ ಮತ್ತು ಪ್ರವಾಸಿಗರಿಗೆ ಪೂರಕ ಸೌಲಭ್ಯಗಳ ಅಗತ್ಯವಿದೆ. ಈ ಬಗ್ಗೆ ಸಮಗ್ರ ವರದಿ ನೀಡಲಾಗುತ್ತದೆ ಎಂದರು.

ದೇವಸ್ಥಾನ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ವಿರುಪಾಕ್ಷ ಆದಿ, ಅರ್ಚಕ ರಾಘು ಪೂಜಾರ, ನಂದೀಶ ಬಂಡಿವಾಡ, ಮಂಜುನಾಥ ಜಲ್ಲಿ ಅವರು ದೇವಸ್ಥಾನದ ಅಗತ್ಯತೆಗಳ ಬಗ್ಗೆ ಮಾಹಿತಿದರು.

ಮನೋಜಕುಮಾರ ಅವರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ತ್ರಿಕೋಟಿ ಶಿವಲಿಂಗ ವೀಕ್ಷಿಸಿ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರಿಂದ ಮಾಹಿತಿ ಪಡೆದರು.

ನಂತರ ನೈಸರ್ಗಿಕ ತಾಣ ಶೆಟ್ಟಿಕೆರೆ ವೀಕ್ಷಿಸಿದರು. 224 ಎಕರೆ ವಿಶಾಲವಾದ ಕೆರೆ, ಇಲ್ಲಿಗೆ ಹಾರಿ ಬರುವ ವಿದೇಶಿ ಪಕ್ಷಿಗಳು, ಮೀನುಗಾರಿಕೆ, ನೀರುನಾಯಿ, ಆಮೆ ಸೇರಿದಂತೆ ಅನೇಕ ಜಲಚರ ಪ್ರಾಣಿ-ಪಕ್ಷಿಗಳು, ಸರಿಸೃಪಗಳು ಇರುವ ತಾಣವಾಗಿದೆ. ಸುತ್ತಲೂ ಗುಡ್ಡ, ಅರಣ್ಯ ಪ್ರದೇಶವಾಗಿದ್ದು ಸಣ್ಣ ನೀರಾವರಿ, ಅರಣ್ಯ ಇಲಾಖೆಯ ಸಹಕಾರದಿಂದ ಹಕ್ಕಿ ವೀಕ್ಷಣೆಗೆ ಬರುವ ಪಕ್ಷಿ ವೀಕ್ಷಣಾ ಗೋಪುರ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಡ್ರೋನ್ ಕ್ಯಾಮರಾ ಮೂಲಕ ಕ್ಷೇತ್ರ ಸರ್ವೇ ಮಾಡಿ ಕ್ರಿಯಾಯೋಜನೆ ರೂಪಿಸಲಾಗುತ್ತದೆ ಎಂದರು. ಜಿಪಂ ಮಾಜಿ ಸದಸ್ಯ ದೀಪಕ ಲಮಾಣಿ, ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ ಗಾಣಿಗೇರ ಈ ಪ್ರದೇಶದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು.

ನಂತರ ಮನೋಜಕುಮಾರ ಅವರು ಶ್ರೀಮಂತಗಡ (ಹೊಳಲಮ್ಮನಗುಡ್ಡ), ಶಿರಹಟ್ಟಿಯ ಜ.ಫಕೀರೇಶ್ವರ ಸಂಸ್ಥಾನಮಠಕ್ಕೆ ಭೇಟಿ ನೀಡಿದರು. ರಂಗನಗೌಡ ಓದುಗೌಡ್ರ, ಜಗದೀಶಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net