ಹಣದ ಬದಲು ಅಕ್ಕಿ ವಿತರಣೆಗೆ ಶೀಘ್ರ ಕ್ರಮ

minister Muniyappa
Published on

ರಾಯಚೂರು: ಪ್ರಸ್ತುತ ಪಡಿತರ ಚೀಟಿದಾರರಿಗೆ ಐದು ಕೆಜಿ ಅಕ್ಕಿ ವಿತರಣೆ ಜತೆಗೆ ಐದು ಕೆಜಿ ಅಕ್ಕಿಯ ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಹಣದ ಬದಲು ಅಕ್ಕಿಯನ್ನು ನೀಡಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಹೊರವಲಯದ ಯರಮರಸ್ ಪ್ರವಾಸಿ ಮಂದಿರದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಂತರ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ಕಿ ವಿತರಣೆಗೆ ಸಂಬಂಸಿದಂತೆ ತೆಲಂಗಾಣ, ಆಂಧ್ರ ಮತ್ತು ಛತ್ತೀಸಗಡದಲ್ಲಿ ಅಕ್ಕಿ ಖರೀದಿಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 1.16 ಕೋಟಿ ಪಡಿತರ ಚೀಟಿಗಳಿದ್ದು 4 ಕೋಟಿ ಲಾನುಭವಿಗಳಿದ್ದಾರೆ. ಈ ತಿಂಗಳು 644 ಕೋಟಿ ರೂ. ಹಣವನ್ನು ಅಕ್ಕಿ ಬದಲು ಪಡಿತರದಾರರ ಖಾತೆಗೆ ಜಮಾ ಮಾಡಲಾಗಿದೆ. ಕೆಲವರ ಬ್ಯಾಂಕ್ ಖಾತೆ ಇಲ್ಲದ ಕಾರಣ ಹಣ ಜಮಾ ಮಾಡಲು ಸಮಸ್ಯೆಯಾಗಿದ್ದು, 680 ಕೋಟಿ ರೂ.ವರೆಗೆ ನೀಡಬೇಕಾಗುತ್ತದೆ.
ಚುನಾವಣೆ ಪ್ರಯುಕ್ತ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ನೀಡುವುದನ್ನು ನಿಲ್ಲಿಸಲಾಗಿತ್ತು. ರಾಜ್ಯದಲ್ಲಿ 2.95 ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯಲ್ಲಿ 12 ಸಾವಿರ ಅರ್ಜಿಗಳು ಬಂದಿವೆ. 15 ದಿನದೊಳಗೆ ಪರಿಶೀಲಿಸಿ ಕಾರ್ಡ್ ವಿತರಣೆ ಮಾಡುವಂತೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎಐಸಿಸಿ ಜಾತಿ ಗಣತಿ ಅವಶ್ಯಕತೆಯಿದೆ ಎಂದು ತಿಳಿಸಿದೆ. ಯಾವುದೇ ಜಾತಿಗೂ ಅನ್ಯಾಯವಾಗಬಾರದು, ಸಾಮಾಜಿಕ ನ್ಯಾಯ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಜಾತಿ ಗಣತಿ ನಡೆಸಲಾಗುತ್ತಿದೆ. ಇದರಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗುವುದಿಲ್ಲ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ. ಹೈಕಮಾಂಡ್ ಆದೇಶದಂತೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಲೋಕಸಭೆ ಚುನಾವಣೆಗೆ ನಿಲ್ಲುವ ಬಗ್ಗೆ ಯೋಚನೆ ಮಾಡಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net