ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಸರದಿ ಸಾಲು!

29 HANUR 2
ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳನ್ನು ಎಲ್‌ಕೆಜಿ ತರಗತಿಗೆ ದಾಖಲಿಸಲು ಪಾಲಕರು ಸರದಿ ಸಾಲಿನಲ್ಲಿ ಕಾದು ನಿಂತಿದ್ದರು.
Published on

ಹನೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು, ಮಳಿಗೆಗಳಲ್ಲಿ ರಸಗೊಬ್ಬರವನ್ನು ಪಡೆಯಲು, ತಹಸೀಲ್ದಾರ್ ಕಚೇರಿಗಳಲ್ಲಿ ಆಧಾರ್ ನೋಂದಣಿಗಾಗಿ ಜನರು ಕ್ಯೂ ನಿಂತಿರುವುದನ್ನು ನೋಡಿದ್ದೇವೆ. ಆದರೆ ತಾಲೂಕಿನ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಮಕ್ಕಳನ್ನು ಎಲ್‌ಕೆಜಿ ತರಗತಿಗೆ ದಾಖಲಿಸಲು ಪಾಲಕರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತಿದ್ದರು.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ. ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಸಂಖ್ಯೆ ಕಡಿಮೆ. ಹೀಗಿರುವಾಗ ಲೊಕ್ಕನಹಳ್ಳಿ ಸರ್ಕಾರಿ ಶಾಲೆಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಸರದಿ ಸಾಲಿನಲ್ಲಿ ನಿಂತು ಮಕ್ಕಳನ್ನು ಎಲ್‌ಕೆಜಿ ತರಗತಿಗೆ ದಾಖಲು ಮಾಡಿರುವುದು ಸರ್ಕಾರಿ ಶಾಲೆ ಬಗ್ಗೆ ಹೊಂದಿರುವ ಕಾಳಜಿಗೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಶತಮಾನವನ್ನು ಪೂರೈಸಿದ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಗೆ ತನ್ನದೇಯಾದ ಇತಿಹಾಸವನ್ನು ಹೊಂದಿದ್ದು, ಪ್ರಸ್ತುತ 272 ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚು ಬಡ ಕುಟುಂಬಕ್ಕೆ ಸೇರಿದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕ ಮಾದೇಶ್ ಹಾಗೂ ಶಿಕ್ಷಕರು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಸರ್ಕಾರದಿಂದ ಮಕ್ಕಳಿಗೆ ದೊರೆಯಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಎಸ್‌ಡಿಎಂಸಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಸಂಪೂರ್ಣ ಸಹಕಾರ ನೀಡುತ್ತಿದೆ.

ಎಲ್‌ಕೆಜಿಗೆ ಭಾರಿ ಬೇಡಿಕೆ: ಲೊಕ್ಕನಹಳ್ಳಿ ಸರ್ಕಾರಿ ಶಾಲೆಯನ್ನು 2019ರಿಂದ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಇಂಗ್ಲಿಷ್ ಮಾಧ್ಯಮದ ಬೋಧನೆಯನ್ನು ಜಾರಿಗೊಳಿಸಿತ್ತು. ಈ ವೇಳೆ ಎಲ್‌ಕೆಜಿ ತರಗತಿಯನ್ನು ಆರಂಭಿಸಲಾಗಿದ್ದು, 30 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ. ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. 2019-20ನೇ ಸಾಲಿನಲ್ಲಿ 30 ಮಕ್ಕಳು, 2020-21ರಲ್ಲಿ 23, 2021-22ರಲ್ಲಿ 26, 2022-23ರಲ್ಲಿ 23 ಹಾಗೂ 23-24ನೇ ಸಾಲಿನಲ್ಲಿ 30 ಮಕ್ಕಳು ದಾಖಲಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಕಲಿಕೆ ಉತ್ತಮವಾಗಿದೆ. ಆದರೆ ಪ್ರವೇಶಾತಿ 30 ಮಕ್ಕಳಿಗೆ ಸೀಮಿತಗೊಳಿಸಿರುವುದರಿಂದ ಗುರುವಾರ ಶಾಲೆಗೆ ಆಗಮಿಸಿದ 60ಕ್ಕೂ ಹೆಚ್ಚು ಪಾಲಕರಲ್ಲಿ 30 ಪಾಲಕರು ಮಾತ್ರ ಮಕ್ಕಳನ್ನು ಎಲ್‌ಕೆಜಿ ತರಗತಿಗೆ ದಾಖಲು ಮಾಡಲು ಸಾಧ್ಯವಾಯಿತು. ಇದರಿಂದ ಆಗಮಿಸಿದ್ದ ಕೆಲ ಪಾಲಕರಲ್ಲಿ ನಿರಾಸೆ ಉಂಟಾಯಿತು. ಹಾಗಾಗಿ ಹೆಚ್ಚು ಮಕ್ಕಳಿಗೆ ಪ್ರವೇಶಾತಿ ನೀಡುವಂತೆ ಪಾಲಕರಿಂದ ಒತ್ತಾಯ ಕೇಳಿಬಂದಿದೆ.

ಲೊಕ್ಕನಹಳ್ಳಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ ನನ್ನ ಮಗನನ್ನು ಎಲ್‌ಕೆಜಿ ತರಗತಿಗೆ ದಾಖಲಿಸಲು ಆಗಮಿಸಿದ್ದೆ. ಆದರೆ ಪ್ರವೇಶಾತಿಯನ್ನು 30 ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಆದ್ದರಿಂದ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಿದರೆ ಈ ಭಾಗದಲ್ಲಿನ ಬಡಜನರಿಗೆ ಅನುಕೂಲವಾಗಲಿದೆ. ಮಹೇಂದ್ರ ಲೊಕ್ಕನಹಳ್ಳಿ ನಿವಾಸಿ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಮಕ್ಕಳೊಂದಿಗೆ ಆಗಮಿಸಿದ್ದರು. ಆದರೆ ಸರ್ಕಾರ ನಿಗದಿಗೊಳಿಸಿರುವ 30 ಮಕ್ಕಳನ್ನಷ್ಟೇ ದಾಖಲಿಸಿಕೊಳ್ಳಲು ಸಾಧ್ಯವಾಯಿತು. ಎಲ್‌ಕೆಜಿಗೆ ಮತ್ತೊಂದು ವಿಭಾಗವನ್ನು ತೆರೆಯುವಂತೆ ಬಿಇಒ ಅವರಲ್ಲಿ ಮನವಿ ಸಲ್ಲಿಸಲಾಗಿದೆ. ಮಾದೇಶ್ ಪ್ರಭಾರ ಮುಖ್ಯ ಶಿಕ್ಷಕ , ಕೆಪಿಎಸ್ ಶಾಲೆ ಲೊಕ್ಕನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net