ಪ್ರಶ್ನೆಪತ್ರಿಕೆಗೆ ಎಗರಿಸಲು ಸರ್ಕಾರಿ ಕಾಲೇಜಿನ ಬೀಗ ಮುರಿದ ಕಳ್ಳರು!

crime
Published on

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದಾರೆ. ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಪಶ್ನೆಪತ್ರಿಕೆ ಎಗರಿಸಲು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕೊಠಡಿಯ ಅಲ್ಮೇರಾದ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಅದರ ಬೀಗದ ಕೀಯನ್ನು ಹುಡುಕಲು ನಾಲ್ಕೈದು ಡ್ರಾಯರ್‌ಗಳ ಬೀಗ ಮುರಿದಿದ್ದಾರೆ. ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಕಚೇರಿಯೊಳಗೆ ಕಳ್ಳರು ಜಾಲಾಡಿರುವುದನ್ನು ಕಂಡಾಗ ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ಎಗರಿಸಲು ಯತ್ನ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಶ್ನಾಪತ್ರಿಕೆ ಇಡಲಾದ ಕಪಾಟಿನ ಬೀಗ ಪ್ರಾಂಶುಪಾಲರ ಬಳಿ ಇದ್ದು, ಹಾಗೂ ಕಪಾಟು ಸೂಕ್ತ ಭದ್ರತಾ ವ್ಯವಸ್ಥೆ ಹೊಂದಿದ್ದ ಹಿನ್ನೆಲೆಯಲ್ಲಿ ಕಳ್ಳರಿಗೆ ಪ್ರಶ್ನೆಪತ್ರಿಕೆ ಕಳವುಗೈಯಲು ಸಾಧ್ಯವಾಗಿಲ್ಲ.

ಇದೇ ವೇಳೆ ಕಾಲೇಜಿನಲ್ಲಿದ್ದ ಕೆಲವು ದೀಪಕಂಬಗಳ ಸಹಿತ ವಸ್ತುಗಳನ್ನು ಕದ್ದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿದ್ದು, ಕಾಲೇಜಿನ ಪ್ರಾಂಶುಪಾಲ ಶೇಖರ್ ಕನ್ನಡ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net