ಕನ್ನಡದ ಬದಲು ಇಂಗ್ಲೀಷ್‌ನಲ್ಲಿ ಪ್ರಶ್ನೆಪತ್ರಿಕೆ: ಮಂಡ್ಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಆಕ್ರೋಶ

Question paper confusion in Mandya University Mandya
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಅರ್ಥಶಾಸ್ತ್ರ ವಿಭಾಗದ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ನೀಡುವ ಬದಲು ಇಂಗ್ಲೀಷ್ ಭಾಷೆಯಲ್ಲಿ ನೀಡಲಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ಅತೃಪ್ತಿ ಹೊರಹಾಕಿದರು.

ವಿವಿಯಲ್ಲಿ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆ ನೀಡಿಲ್ಲ. ಈ ವಿಷಯವನ್ನು ವಿವಿ ಕುಲಪತಿ ಅವರ ಗಮನಕ್ಕೆ ತರಲಾಗಿತ್ತು. ಆದರೂ ಎರಡನೇ ಸಮೆಸ್ಟರ್‌ನ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಮತ್ತೆ ಇಂಗ್ಲಿಷ್‌ನಲ್ಲಿ ನೀಡುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಜತೆಗೆ ಮೌಲ್ಯಮಾಪನ ಕುಲಸಚಿವ ಎಚ್.ಜಿ.ರಂಗರಾಜು ಅವರಲ್ಲಿ ಅಳಲು ತೋಡಿಕೊಂಡರು.

ಎಂಎ ಅರ್ಥಶಾಸ್ತ್ರ ವಿಭಾಗದಲ್ಲಿ ಒಟ್ಟು 17 ವಿದ್ಯಾರ್ಥಿಗಳಿದ್ದರು. ಈ ಪೈಕಿ ಮೂವರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು, ಈ ಕಾರಣಕ್ಕೆ ಅವರು ಕಾಲೇಜಿಗೆ ಬರುತ್ತಿಲ್ಲ. ಈ ಬಾರಿಯು ಅನುತ್ತೀರ್ಣವಾದರೆ ವ್ಯಾಸಂಗವನ್ನು ನಿಲ್ಲಿಸುವ ಸ್ಥಿತಿ ಬಂದಿದೆ. ಪಾಲಕರು ಸಾಲ ಮಾಡಿ ಕಾಲೇಜಿನ ಶುಲ್ಕ ಪಾವತಿ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಬೇಸರ ಹೊರಹಾಕಿದರು.

ಪ್ರಥಮ ಸೆಮಿಸ್ಟರ್‌ನಲ್ಲಿಯೇ ಅಧ್ಯಯನಕ್ಕೆ ತಕ್ಕಂತಹ ವಿಷಯವಾರಿನ ಬಗ್ಗೆ ಗ್ರಂಥಾಲಯದಲ್ಲಿ ಮಾಹಿತಿಯೇ ಸಿಗಲಿಲ್ಲ. ಹಾಗಾಗಿ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ದ್ವಿತೀಯ ಸೆಮಿಸ್ಟರ್‌ನಲ್ಲಿ ಪ್ರಶ್ನೆಪತ್ರಿಕೆಯನ್ನು ಇಂಗ್ಲೀಷ್‌ನಲ್ಲಿ ನೀಡಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುವಂತೆ ನಡೆದುಕೊಳ್ಳುತ್ತಿರುವ ವಿವಿಯ ನಡೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಲಸಚಿವ ಎಚ್.ಜಿ.ರಂಗರಾಜು ಮಾತನಾಡಿ, ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗೆ ಸಂಬಂಧಪಟ್ಟಂತೆ ಮೈಸೂರಿನ ವಿವಿಯ ಮಾದರಿಯನ್ನು ಅನುಸರಿಸುತ್ತಿದ್ದೆವು. ಮಂಡ್ಯ ವಿವಿಯಾದ ನಂತರ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಜತೆಗೆ ಕನ್ನಡ ಪ್ರಶ್ನೆ ಪತ್ರಿಕೆಯನ್ನು ನೀಡಲು ನಿರ್ಧರಿಸಿದ್ದೆವು. ಈಗ ಮೈಸೂರು ವಿವಿ ಪ್ರಶ್ನೆ ಪತ್ರಿಕೆ ಬಂದಿರುವುದರಿಂದ ಅದನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಗೊಂದಲ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆ ಸಾಥ್: ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮಾಹಿತಿ ತಿಳಿದು ವಿವಿಗೆ ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳು ಭೇಟಿ ನೀಡಿದರು. ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಕನ್ನಡದಲ್ಲಿ ಪಾಠ ಮಾಡಿ ಈಗ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ನೀಡಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದ್ದಾರೆ. ಇದನ್ನು ಸರಿಪಡಿಸದೇ ಹೋದರೆ ಮುಂದಿನ ನಾಲ್ಕು ವಿಷಯಗಳ ಪರೀಕ್ಷೆಯನ್ನು ನಿಷೇಧ ಮಾಡಿ ಮರು ಪರೀಕ್ಷೆ ಮಾಡುವಂತೆ ಒತ್ತಾಯಿಸಿ ಆ.5 ರಂದು ಸೋಮವಾರ ವಿದ್ಯಾರ್ಥಿಗಳ ಜತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳಾದ ಎಚ್.ಜೆ.ನರೇಂದ್ರ, ಎಂ.ವಿನುತಾ, ಮನೋಜ್, ಜಯಶೇಖರ್, ಎಚ್.ಎಸ್.ನಂಜುಂಡಸ್ವಾಮಿ, ದರ್ಶನ್‌ಕುಮಾರ್, ಮನೋಜ್, ಪ್ರಜ್ವಲ್, ಕೆ.ಎಂ.ಸುಚಿತ್ರಾ, ಪೂರ್ಣಿಮಾ, ಜಯಶೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net