

ಮೈಸೂರು: ಲಲಿತ ಕಲೆಗಳನ್ನು ಬೆಳೆಸುವ ಕೆಲಸ ಹೆಚ್ಚಾಗಲಿ ಎಂದು ಖ್ಯಾತ ವಯೋಲಿನ್ ವಿದ್ವಾಂಸ ಮೈಸೂರು ಎಂ.ಮಂಜುನಾಥ್ ಹೇಳಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಜತ ಮಹೋತ್ಸವ ಹಾಗೂ ಶಿಲ್ಪಿಗಳಾದ ದೇವಲಕುಂದ ವಾದಿರಾಜ್ ಮತ್ತು ಬಿ.ಬಸವಣ್ಣ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸಂಗೀತ ವಿದ್ವಾಂಸರು, ಕಲಾವಿದರು ಮತ್ತು ಸಾಹಿತಿಗಳನ್ನು ವಿದೇಶಿಯರು ಗೌರವದಿಂದ ಆಹ್ವಾನಿಸಿ ಕಛೇರಿ ಏರ್ಪಡಿಸುತ್ತಾರೆ. ನಮ್ಮಲ್ಲೂ ಕಲೆಗಳನ್ನು ಆದರಿಸುವುದು ಇನ್ನಷ್ಟು ಹೆಚ್ಚಾಗಲಿ ಎಂದರು.
ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ನೂರು ಮಹಡಿ ಎತ್ತರದ ಕಟ್ಟಡಗಳನ್ನು ನಿರ್ಮಿಸಬಹುದು. ಹೊಸ ತಂತ್ರಜ್ಞಾನ ಕಂಡುಹಿಡಿಯಬಹುದು. ಆದರೆ, ಭಾರತದಂತೆ ಸಾಂಸ್ಕೃತಿಕ, ಸಾಹಿತ್ಯ ಮತ್ತು ಪಾರಂಪರಿಕ ಶ್ರೀಮಂತಿಕೆ ಹೊಂದಲು ಸಾಧ್ಯವಿಲ್ಲ ಎಂದರು.
ಯಾವ ವೃತ್ತಿ ಹೆಚ್ಚು ಹಣ ತಂದುಕೊಡುವುದೋ ಅದನ್ನೇ ಮಕ್ಕಳಿಗೆ ಓದಿಸುವುದು ನಮ್ಮ ಜವಾಬ್ದಾರಿ ಅಂದುಕೊಂಡಿದ್ದೇವೆ. ನಮ್ಮ ಇತಿಹಾಸ, ಪರಂಪರೆ, ಕಲೆ ಹಾಗೂ ಸಾಹಿತ್ಯದ ಬಗ್ಗೆ ಹೆಮ್ಮೆ ಪಡಬೇಕು. ಅವುಗಳನ್ನು ಉಳಿಸಿ-ಬೆಳೆಸಬೇಕು ಎಂದರು.
ಯಾವುದೇ ದೇಶದವರು ಚಂದ್ರಲೋಕಕ್ಕೆ ವಿಮಾನ ಹಾರಿಸಬಹುದು. ಆದರೆ ಕಲೆ, ಸಾಹಿತ್ಯದ ಒಂದು ದೊಡ್ಡ ಪರಂಪರೆ ಕಟ್ಟಲು ಶತಮಾನಗಳವರೆಗೆ ಶ್ರಮಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಶಿಕ್ಷಣವಿಂದು ಧನ ಸಂಪಾದನೆಯ ಏಕೈಕ ಉದ್ದೇಶ ಹೊಂದಿದೆ. ಆದರೆ ಸಾಂಸ್ಕೃತಿಕವಾಗಿ ಭಾರತಕ್ಕೆ ಅಪಾರ ಮಹತ್ವ ಇದೆ. ಕಲೆ ಮನುಷ್ಯನನ್ನು ಅಮರನನ್ನಾಗಿಸುತ್ತದೆ. ಕಲೆಗಳನ್ನು ಬೆಳೆಸುವ ಕೆಲಸವನ್ನು ನಮ್ಮ ಇಲಾಖೆ, ಅಕಾಡೆಮಿ ಮಾಡುತ್ತಿದೆ ಎಂದರು.
ವಿಜಯನಗರ ಸಾಮ್ರಾಜ್ಯದ ವಂಶಸ್ಥ ಶ್ರೀಕೃಷ್ಣದೇವರಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಕಲೆ ಹಾಗೂ ಸಂಸ್ಕೃತಿಗಾಗಿ ಏನನ್ನಾದರೂ ಕೊಡುಗೆ ನೀಡಿದರೆ ಮುಂದಿನ ಪೀಳಿಗೆ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆ. ನನ್ನ ಪೂರ್ವಿಕರು ಮಾಡಿದ ಪುಣ್ಯದಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಅಕಾಡೆಮಿ ಅಧ್ಯಕ್ಷ ವೀರಣ್ಣ ಎಂ.ಅರ್ಕಸಾಲಿ, ಚೆನ್ನೈನ ಡಾ.ಕನಕರಾಜು, ಅಕಾಡೆಮಿ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಇದ್ದರು.
ಶಿಲ್ಪಿಗಳಾದ ದೇವಲಕುಂದ ವಾದಿರಾಜ್ ಹಾಗೂ ಬಿ.ಬಸವಣ್ಣ ಬದುಕು ಮತ್ತು ಕಲಾಕೃತಿ ಕುರಿತು ಕ್ರಮವಾಗಿ ಗಣೇಶ್ ಎಲ್.ಭಟ್ ಹಾಗೂ ಪಿ.ಆರ್.ನಾಗರಾಜ್ ಮಾತನಾಡಿದರು.