

ಮಂಡ್ಯ: ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಇಲಾಖೆಗಳಿಂದ ನೀಡಲಾಗುವ ಸೌಲಭ್ಯಗಳ ಕುರಿತಾಗಿ ಅಲ್ಪಸಂಖ್ಯಾತರಿಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿಲಾಗಿದ್ದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಸಂಬಂಧ 2025-26ನೇ ಸಾಲಿನ ಜುಲೈ-ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕವಾಗಿ ವಿವಿಧ ಇಲಾಖೆಗಳ ಕಾರ್ಯಕ್ರಮವಾರು ಸಾಧಿಸಲಾಗಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಹೆಚ್ಚು ವಾಸಿಸುವ ಸ್ಥಳಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯೊಂದಿಗೆ ಸೇರಿ ಯೋಜನೆಗಳ ಕುರಿತು ಜಾಗೃತಿ ಹಾಗೂ ಕರಪತ್ರ ನೀಡಿ ಮಾಹಿತಿ ತಲುಪಿಸಿ ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವುದೇ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜಿಲ್ಲೆಯಲ್ಲಿ 55 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಮಕ್ಕಳಿದ್ದು, ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳನ್ನು ಗುರುತಿಸಿ. ಆ ಮಕ್ಕಳನ್ನು ಕಾಲ ಕಾಲಕ್ಕೆ ತೂಕ ಪರಿಶೀಲನೆ ನಡೆಸಿ ಅವರಿಗೆ ಪೌಷ್ಟಿಕಾಂಶ ಕೊಡಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಎಲ್ಲ ಅಂಗನವಾಡಿಗಳು ಪೌಷ್ಟಿಕಾಂಶಗಳನ್ನು ಕೊಡಿಸಬೇಕು. ಪ್ರಧಾನ ಮಂತ್ರಿಗಳ ಮಾತೃವಂದನಾ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಹೇಳಿದರು.
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಆದ್ಯತೆ: ಹೆಚ್ಚಿನದಾಗಿ ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣದ ಕುರಿತಾಗಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಅನೇಕ ಮಕ್ಕಳು ಏಳನೇ ತರಗತಿವರೆಗೂ ಉರ್ದು ಮಾಧ್ಯಮದಲ್ಲಿ ಕಲಿತು ಪ್ರೌಢ ಶಿಕ್ಷಣಕ್ಕೆ ಕನ್ನಡ ಅಥವಾ ಆಂಗ್ಲ ಮಾಧ್ಯಮಕ್ಕೆ ಸೇರಿಕೊಳ್ಳುತ್ತಾರೆ. ಇದರಿಂದ ಶಿಕ್ಷಣದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ. ಶಿಕ್ಷಕರು ಅಂತಹ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕು. ಅಲ್ಪಸಂಖ್ಯಾತ ಮಕ್ಕಳ ಕಳೆದ ಎರಡು ವರ್ಷಗಳ ಎಸ್‌ಎಸ್‌ಎಲ್ಸಿ ಫಲಿತಾಂಶ ನೋಡಿದರೆ ಅನೇಕ ಅಲ್ಪಸಂಖ್ಯಾತ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಜತೆಗೆ ಮಕ್ಕಳು ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಲು ಕಾರಣವೇನೆಂದು ಪರಿಶೀಲನೆ ನಡೆಸಿ ಜತೆ ಅವರ ಫಲಿತಾಂಶವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಹೆಚ್ಚಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಮಕ್ಕಳು ಶಾಲೆಯನ್ನು ಅಲ್ಲಿಗೆ ಮೊಟಕುಗೊಳಿಸಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ದುಡಿಯಲು ಹೋಗುತ್ತಾರೆ. ಶಿಕ್ಷಕರು ಅಂತಹ ಮಕ್ಕಳನ್ನು ಗುರುತಿಸಿ ಅವರ ಪಾಲಕರೊಂದಿಗೆ ಮಾತನಾಡಿ ಅವರನ್ನು ಮರಳಿ ಶಾಲೆಗೆ ತರಬೇಕು. ಜಿಲ್ಲೆಯಲ್ಲಿ ಇರುವ ಎಲ್ಲ ಅಲ್ಪಸಂಖ್ಯಾತ ಶಾಲೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರ ಲಭ್ಯತೆ ಇರುವ ಕುರಿತಾಗಿ ಖಾತ್ರಿ ಪಡಿಸಿಕೊಳ್ಳಿ. ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತ ಹಾಸ್ಟೆಲ್ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಶೇ.86ರಷ್ಟು ಫಲಿತಾಂಶವನ್ನು ಹಾಸ್ಟೆಲ್ಗಳು ದಾಖಲಿಸಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಮಕ್ಕಳ ಫಲಿತಾಂಶವನ್ನು ಶೇ.100 ರಷ್ಟು ಗೊಳಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಾಂತ್ರಿಕ ಶಿಕ್ಷಣದ ಕಡೆ ಮುಖ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಸಕ್ತ ವಿಷಯಗಳಲ್ಲಿ ಕೌಶಲ ತರಬೇತಿ ಕೊಡಿಸಿ, ಪ್ರಸ್ತುತ ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಅಲ್ಪಸಂಖ್ಯಾತ ನಿರುದ್ಯೋಗಿಗಳು ನೋಂದಣಿ ಆಗಿದ್ದಾರೆ. ಕಾಲೇಜುಗಳಲ್ಲಿ ಯುವನಿಧಿಯ ಕುರಿತಾಗಿ ಹೆಚ್ಚಿನ ಪ್ರಚಾರ ಕೈಗೊಂಡು ಇನ್ನೂ ಹೆಚ್ಚಿನ ಅರ್ಹ ಅಲ್ಪಸಂಖ್ಯಾತ ನಿರುದ್ಯೋಗಿಗಳನ್ನು ನೋಂದಣಿ ಮಾಡಿಸಿ ಎಂದು ಸೂಚಿಸಿದ ಜಿಲ್ಲಾಧಿಕಾರಿ, ಬ್ಯಾಂಕ್‌ಗಳು ಉದ್ಯಮ ಪ್ರಾರಂಭಿಸಲು ಇಚ್ಚಿಸುವ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹಾಗೂ ಕಾಲೇಜಿನಲ್ಲಿ ಶೈಕ್ಷಣಿಕ ಸಾಲ ಸೌಲಭ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ವಿವಿಧ ಇಲಾಖೆಗಳಿಂದ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸಿ. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಶಾಲಾ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಲೋಕೇಶ್, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಮುಖಂಡ ಅಮ್ಜದ್ ಪಾಷಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.