ದಂಧೆ ನಡೆಯುವುದು ಖಾಕಿಗೆ ಗೊತ್ತಿಲ್ವಾ?: ಶಾಸಕ ರವಿಕುಮಾರ್ ಗಣಿಗ ಕೆಂಡಾಮಂಡಲ

Quarterly progress review meeting Mandya
Published on

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ವೇಶ್ಯಾವಾಟಿಕೆ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಹಾಗೂ ರೌಡಿಸಂ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಗೊತ್ತಿಲ್ವಾ?. ನಗರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ಮೈಸೂರಿನ ಒಡನಾಡಿ ಸಂಸ್ಥೆಯವರು ಬಂದು ಹಿಡಿದುಕೊಡಬೇಕಾ?. ಇಂತಹ ರಂಗೋಲಿ ಕೆಳಗೆ ನುಸುಳುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಬಿಡಬೇಕು. ಇನ್ನೊಂದು ವಾರದೊಳಗೆ ಇಂತಹ ಚಟುವಟಿಕೆಗೆ ಕಡಿವಾಣ ಹಾಕಿ ನನಗೆ ವರದಿ ಕೊಡಿ ಎಂದು ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್‌ಗೆ ಶಾಸಕ ರವಿಕುಮಾರ್ ಗಣಿಗ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿರುವ ಪೊಲೀಸ್ ಇಲಾಖೆ ವಿರುದ್ಧ ಕೆಂಡಾಮಂಡಲರಾದರು. ವೇಶ್ಯಾವಾಟಿಕೆ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಹಾಗೂ ರೌಡಿಸಂ ಚಟುವಟಿಕೆ ಎಲ್ಲೆಲ್ಲಿ ನಡೆಯುತ್ತಿದೆ ಎನ್ನುವುದು ಅಧಿಕಾರಿಗಳಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಆದರೂ ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕ್ಲಬ್‌ಗಳಲ್ಲಿ ಎಗ್ಗಿಲ್ಲದೆ ಜೂಜಾಟ ನಡೆಯುತ್ತಿದೆ. ಇಸ್ಪೀಟ್ ಆಡಲು ಮೈಸೂರು, ಬೆಂಗಳೂರಿನಿಂದ ಬರುತ್ತಿದ್ದಾರೆ. ಹಳ್ಳಿಗಳಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಯುವಕನೊಬ್ಬ ನನಗೆ ಕರೆ ಮಾಡಿ ಕ್ರಿಕೆಟ್ ಬೆಟ್ಟಿಂಗ್‌ನಿಂದಾಗುತ್ತಿರುವ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡನು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಾನೆ. ಪೊಲೀಸರು ಏನು ಕೆಲಸ ಮಾಡುತ್ತಿದ್ದೀರಿ. ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ಕೆಲಸ ಮಾಡಿ. ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಚೇರಿ ಬಿಟ್ಟು ಹಳ್ಳಿಗೆ ತೆರಳಿ: ಪೂರ್ವ ಮುಂಗಾರು ಪ್ರಾರಂಭವಾಗಿದೆ. ಕೃಷಿ ಚಟುವಟಿಕೆ ಆರಂಭವಾಗಲಿದೆ. ಆದ್ದರಿಂದ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಪ್ರತಿ ಹಂತದಲ್ಲಿಯೂ ನನಗೆ ಮಾಹಿತಿ ಕೊಡಬೇಕು. ಒಟ್ಟಾರೆ ರೈತರು ಕೃಷಿ ಚಟುವಟಿಕೆ ಮಾಡಲು ಸಮಸ್ಯೆಯಾಗಬಾರದು ಎಂದು ರವಿಕುಮಾರ್ ಗಣಿಗ ತಿಳಿಸಿದರು.

ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ರೈತರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡರೆ ಪ್ರಯೋಜನವಿಲ್ಲ. ಅಥವಾ ನಗರದ ಅಕ್ಕಪಕ್ಕದಲ್ಲಿರುವ ಗ್ರಾಮಕ್ಕೆ ಭೇಟಿ ಕೊಟ್ಟು ಪ್ರವಾಸ ಮಾಡಿದ್ದೆ ಎನ್ನುವುದರಿಂದ ಸಮಸ್ಯೆ ಏನಿದೆ ಎನ್ನುವುದು ತಿಳಿಯುವುದಿಲ್ಲ. ಬದಲಿಗೆ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಕ್ಕೂ ಭೇಟಿ ಕೊಡಿ, ಆಗ ನಿಮಗೆ ನಿಜವಾದ ಸಮಸ್ಯೆ ಏನೆಂಬುದು ಅರಿವಿಗೆ ಬರುತ್ತದೆ. ಜನರಿಗಾಗಿ ನೀಡಿರುವ ಯೋಜನೆಯ ಮಾಹಿತಿಯನ್ನು ಕರಪತ್ರದ ಮೂಲಕ ಹಂಚುವುದರ ಜತೆಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಈ ವರ್ಷ ಸರ್ಕಾರಿ ಶಾಲೆ ಪುನರಾರಂಭದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡೋಣ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಅಂತೆಯೇ ಮುಂದಿನ ಪರೀಕ್ಷೆಯಲ್ಲಿ ಇನ್ನಷ್ಟು ಹೆಚ್ಚಿನ ಫಲಿತಾಂಶ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಬಿಇಒಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ತಾಪಂ ಇಒ ವೀಣಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ರುದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ತಿಮ್ಮೇಶ್ ಸೇರಿದಂತೆ ಕೆಡಿಪಿ ನಾಮನಿರ್ದೇಶಿತ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net