

ಮಂಡ್ಯ: ಜಮೀನಿನ ಸರ್ವೇ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅಡ್ಡದಾರಿ ಹಿಡಿಯುವುದು ಬೇಡ. ಒಂದು ವೇಳೆ ಈ ಬಗ್ಗೆ ದೂರು ಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಜಿಲ್ಲೆಯಲ್ಲಿ ನಡೆಯುತ್ತಿರುವ ದರಖಾಸ್ತು ಪೋಡಿ ದುರಸ್ತಿ ಬಗ್ಗೆ ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿ ಸಚಿವರು, ಜಮೀನಿನ ಸರ್ವೇಗೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳು ಅಡ್ಡದಾರಿ ಹಿಡಿಯುತ್ತಿದ್ದಾರೆ. ಜೇಷ್ಠತೆ ಮೀರಿ ಸರ್ವೇ ಮಾಡುವುದು. ಇದಲ್ಲದೆ ಆಮಿಷಕ್ಕೊಳಗಾಗಿ ಒಬ್ಬರ ಪರವಾಗಿ ನಡೆದುಕೊಳ್ಳುವುದಿದೆ. ಇಂತಹ ಕೆಲಸ ಮಾಡುವಂತಿಲ್ಲ. ಈ ಸಂಬಂಧ ತಮ್ಮ ಅಧೀನ ಅಧಿಕಾರಿ, ಸಿಬ್ಬಂದಿ ಸೂಚನೆ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಡಿಡಿಎಲ್‌ಆರ್ ವಿರೂಪಾಕ್ಷ ಅವರಿಗೆ ಎಚ್ಚರಿಕೆ ನೀಡಿದರು.
ಕಂದಾಯ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ಸಭೆಗೆ ಮಾಹಿತಿ ನೀಡಿದ ಡಾ.ಕುಮಾರ, 2023 ಜು.1ರಿಂದ 2025 ಫೆ.10ರವರೆಗೆ ಜಿಲ್ಲೆಯಲ್ಲಿ 18,293 ಪ್ರಕರಣದ ಪೈಕಿ 1,832 ಕೇಸ್‌ಗಳಷ್ಟೇ ಬಾಕಿ ಉಳಿದಿದೆ. ನ್ಯಾಯಾಲಯ ಪ್ರಕರಣ ವಿಲೇ ಮಾಡುವಲ್ಲಿ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆದಾಗ್ಯೂ ಉಳಿದ ಪ್ರಕರಣದ ಬಗ್ಗೆ ಗಮನಹರಿಸುವಂತೆ ಎಸಿ, ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದರು. ಸಚಿವರು ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಡಿಸಿ, ಎಸಿ, ತಹಸೀಲ್ದಾರ್ ಕೋರ್ಟ್‌ಗೆ ದಾಖಲಾಗುವ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸಬೇಕು. ಒಂದು ವೇಳೆ ಬಗೆಹರಿಯದಿದ್ದರೆ ಅಂತಹವನ್ನು ಸಿವಿಲ್ ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ವರದಿ ಕೊಡಿ. ಯಾವುದೇ ಕಾರಣಕ್ಕೂ ಅಲೆದಾಡುವುದು ಬೇಡ. ಜತೆಗೆ ಗದ್ದಲವಾಗುವುದು ಬೇಡ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ವಿವೇಕಾನಂದ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.