ಪ್ರಶ್ನಿಸಿದರೆ, ವೈದ್ಯರು ಜಬರ್ದಸ್ತ್ ಮಾಡ್ತಾರೆ: ಶಾಸಕ ರವಿಕುಮಾರ್ ಗಣಿಗ ಬೇಸರ

Quarterly progress review meeting Mandya
Published on

ಮಂಡ್ಯ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರ ಪೈಕಿ ಕೆಲವರು ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಬರುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಜಬರ್ದಸ್ತ್‌ನಿಂದ ಮಾತನಾಡುತ್ತಾರೆ. ಇಂತಹ ವರ್ತನೆಯನ್ನು ದೇವರು ಮೆಚ್ಚುವುದಿಲ್ಲ ಎಂದು ಶಾಸಕ ರವಿಕುಮಾರ್ ಗಣಿಗ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ಸಂಜೆ 4 ಗಂಟೆಗೆ ಮನೆಗೆ ತೆರಳುತ್ತಾರೆ. ರಾತ್ರಿ ಪಾಳಿಯಲ್ಲಿ ಕಾಂಪೌಂಡರ್ ಚಿಕಿತ್ಸೆ ನೀಡುತ್ತಾರೆ. ಇದನ್ನು ಪ್ರಶ್ನಿಸಿದರೆ ನಮ್ಮ ಸಂಘಟನೆ ಸ್ಟ್ರಾಂಗ್ ಇದೆ ಎನ್ನುತ್ತಾರೆ. ಇದು ಯಾವ ನ್ಯಾಯ ಎಂದು ಕಿಡಿಕಾರಿದರು.

ರವೀಂದ್ರ ಮೂರ್ತಿ ಎನ್ನುವ ವೈದ್ಯ ಎಲ್ಲೂ ಸರಿಯಾಗಿ ಕೆಲಸ ಮಾಡುವುದಿಲ್ಲ. ಪ್ರಶ್ನಿಸಿದರೇ ಫ್ಯಾಮಿಲಿ ಪ್ರಾಬ್ಲಂ ಎನ್ನುತ್ತಾರೆ. ಜನಪ್ರತಿನಿಧಿಗಳಾದ ನಾವು ರಾತ್ರಿ 12 ಗಂಟೆಯಾದರೂ ರಸ್ತೆಯಲ್ಲಿರುತ್ತೇವೆ. ಆದರೆ ರೋಗಿಗಳನ್ನು ಉಪಚರಿಸಬೇಕಾದ ವೈದ್ಯರು ಕರ್ತವ್ಯದಲ್ಲಿರುವುದಿಲ್ಲ. ಈ ಬಗ್ಗೆ ಏನು ಕ್ರಮ ವಹಿಸಿದ್ದೀರಿ?. ಹೋಬಳಿ ಕೇಂದ್ರದ ಆಸ್ಪತ್ರೆಗಳಿಗೆ ರಾತ್ರಿ ಭೇಟಿ ನೀಡೋಣ, ನೈಜ್ಯ ಸ್ಥಿತಿ ನಿಮಗೆ ಅರಿವಾಗುತ್ತದೆ ಎಂದು ಟಿಎಚ್‌ಒ ಡಾ.ಜವರೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಟಿಎಚ್‌ಒ, ವೈದ್ಯರಿಗೆ ಸಮಯ ಪಾಲನೆಯಲ್ಲಿ ಕೆಲಸ ಮಾಡಬೇಕೆಂದು ತಿಳಿ ಹೇಳಿದ್ದೇವೆ ಎಂದು ಸಮಾಜಾಯಿಸಿ ನೀಡಿದರು.

ಮಂಡ್ಯದಿಂದ ಬಸರಾಳು ಹೋಬಳಿ ಕೇಂದ್ರ 25 ಕಿ.ಮೀ ದೂರವಿದೆ. ರೋಗಿಗಳು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬರಲು ಆಂಬುಲೆನ್ಸ್ ಸೇವೆ ಇಲ್ಲ. ಜನರು ಸತ್ತ ಮೇಲೆ ಹಣ ಅಥವಾ ಆಂಬುಲೆನ್ಸ್ ನೀಡುತ್ತೀರಾ?. ಈ ಬಗ್ಗೆ ಹಲವು ಬಾರಿ ಹೇಳಿದರೂ ಆಂಬುಲೆನ್ಸ್ ಸೇವೆ ಸಿಕ್ಕಿಲ್ಲ. ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ ಬಿಡಿ. ಜನರಿಂದ ದಾನ ಪಡೆದು ಅಥವಾ ನನ್ನ ಸ್ವಂತ ಹಣದಿಂದ ಆಂಬುಲೆನ್ಸ್ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಅತೃಪ್ತಿ ಹೊರಹಾಕಿದರು.

ಮಿಮ್ಸ್‌ನಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಾರ್ಯಾರಂಭಕ್ಕೆ ಅಡ್ಡಿ ಏನು ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರನ್ನು ಶಾಸಕರು ಪ್ರಶ್ನಿಸಿದರು. 15 ಕೋಟಿ ರೂ ಅನುದಾನದ ಅಗತ್ಯವಿದೆ, ಹಣ ಬಂದೊಡನೆ ಕಾರ್ಯಾರಂಭ ಮಾಡುತ್ತೇವೆ ಎಂದರು. ರವಿಕುಮಾರ್ ಪ್ರತಿಕ್ರಿಯಿಸಿ, 13 ಕೋಟಿ ರೂ ಅನುದಾನ ಬಿಡುಗಡೆಗೆ ಹಣಕಾಸು ಇಲಾಖೆ ಕಳೆದ ವಾರ ಆದೇಶ ನೀಡಿದೆ. ಇದು ನಿಮಗೆ ತಿಳಿದಿಲ್ಲವೇ ಎಂದು ಮರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಕೀಯ ಅಧೀಕ್ಷಕ, ಹಣ ಬಿಡುಗಡೆಯ ಮಾಹಿತಿ ಇದೆ. ಅಗತ್ಯ ಸಿಬ್ಬಂದಿ ನೇಮಕಾತಿ ಸಮಸ್ಯೆ ಇದೆ. ಬಗೆಹರಿಸಿ ಚಿಕಿತ್ಸೆ ನೀಡಲು ಮುಂದಾಗುತ್ತೇವೆಂದರು. ಇದರಿಂದ ಬೇಸರಗೊಂಡ ಶಾಸಕ, ನಿಮ್ಮ ಜತೆ ಮಾತನಾಡಿದರೆ ಏನೂ ಪ್ರಯೋಜನವಿಲ್ಲ. ನಾನು ಇಲಾಖಾ ಮಟ್ಟದಲ್ಲಿ ಮಾತನಾಡುತ್ತೇನೆ. ಮಿಮ್ಸ್ ಆಸ್ಪತ್ರೆಗೆ ಬೇಕಾದ ಅನುದಾನ, ವೈದ್ಯರ ಸಂಬಳ, ಟಿಎ, ಡಿಎ ಎಲ್ಲ ನೀಡಿದರೂ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ. ನನಗೆ ಪ್ರತಿ ದಿನ ಕನಿಷ್ಟ 25 ದೂರು ಬರುತ್ತವೆ. ಉತ್ತಮ ಚಿಕಿತ್ಸೆ ನೀಡುವ ಕಡೆ ಗಮನ ಹರಿಸಿ ಎಂದು ತಾಕೀತು ಮಾಡಿದರು.

ಉಪಕೇಂದ್ರ ಪ್ರಾರಂಭಿಸಿ: ಪಡಿತರ ಆಹಾರ ಪಡೆಯಲು ಹುನಗನಹಳ್ಳಿ, ಮರಿಲಿಂಗನದೊಡ್ಡಿ ಗ್ರಾಮದ ಜನರು ವಿತರಣೆಗೆ ನಾಲ್ಕೈದು ಕಿ.ಮೀ ದೂರ ಹೋಗಬೇಕು. ಈ ಎರಡು ಗ್ರಾಮದಲ್ಲಿಯೂ ಉಪ ಕೇಂದ್ರ ಆರಂಭಿಸಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಮತ್ತು ಆಹಾರ ಇಲಾಖೆ ನಿರೀಕ್ಷಕ ರೇವಣ್ಣ ಅವರಿಗೆ ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ತಾ.ಪಂ ಇಒ ವೀಣಾ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರುದ್ರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net