ಕೆಲಸ ಇಷ್ಟವಿಲ್ಲವಾದರೆ ಬಿಟ್ಟು ಹೋಗಿ

27ard03
ಔರಾದ್‌ನಲ್ಲಿ ಗುರುವಾರ ಕರೆದಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಮಾತನಾಡಿದರು. ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಕಮಲನಗರ ತಾಪಂ ಇಒ ಮಾಣಿಕರಾವ ಪಾಟೀಲ್, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಇದ್ದರು.
Published on

ಔರಾದ್: ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಬಹುತೇಕ ಇಲಾಖೆಗಳಲ್ಲಿ ಸರಿಯಾಗಿ ಕೆಲಸ ನಡೆಯುತ್ತಿಲ್ಲ. ನನ್ನ ಹೆಸರು ಕೆಡುತ್ತಿದೆ. ಇಷ್ಟವಿದ್ದರೆ ಕೆಲಸ ಮಾಡಿ. ಇಲ್ಲವೆಂದರೆ ಬಿಟ್ಟು ಹೋಗಿ ಎಂದು ಶಾಸಕ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ಕಾಟಾಚಾರಕ್ಕೆ ಸಭೆ ನಡೆದರೆ ಏನು ಪ್ರಯೋಜನ? ನಾನು ವೈಯಕ್ತಿಕ ಕೆಲಸಕ್ಕಾಗಿ ಸಭೆ ನಡೆಸುತ್ತಿಲ್ಲ. ಅಧಿಕಾರಿಗಳಲ್ಲೂ ಜವಾಬ್ದಾರಿ ಕಾಣಿಸಬೇಕು ಎಂದರು.

ಸಭೆಯಲ್ಲೇ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಅವರು, ತಾಪಂ ಇಒ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದರು. ಎಲ್ಲ ಕೆಡಿಪಿ ಸಭೆಗಳಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಮುಂದಿನ ಸಭೆಗಳಲ್ಲಿ ಎಲ್ಲ ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಿರಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಬೇಕಾಗುತ್ತದೆ ಎಂದು ಔರಾದ್(ಬಿ) ಮತ್ತು ಕಮಲನಗರ ತಾಪಂ ಇಒಗಳಿಗೆ ಎಚ್ಚರಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಹಾಜರಾತಿ ವಿವರಣೆ ಪಡೆದ ಅವರು, ಸಣ್ಣ ನೀರಾವರಿ ಇಲಾಖೆ ಸೇರಿ ಕೆಲ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ತಾಪಂ ಇಒ ವಿರುದ್ಧ ಸಿಡಿಮಿಡಿಗೊಂಡರು. ಕೆಡಿಪಿ ಸಭೆಗಳಲ್ಲಿ ಗೈರು ಹಾಜರಾದವರ ವಿರುದ್ಧ ಏನು ಕ್ರಮ ಜರುಗಿದೆ ಎಂಬ ಮಾಹಿತಿ ಕೊಡಿ ಎಂದು ಕೇಳಿದರೂ ಸಮಾಧಾನಕರ ಉತ್ತರ ಸಿಗದಿರುವುದಕ್ಕೆ ಬೇಸರಗೊಂಡರು.

ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರದಲ್ಲೇ ವಾಸಿಸಬೇಕೆಂದು ಬಹಳಷ್ಟು ಸಾರಿ ತಿಳಿಸಿದರೂ ಬಹುತೇಕರು ಬೀದರ್‌ನಲ್ಲಿ ಇರುತ್ತಿದ್ದಾರೆ. ಇದರಿಂದ ಕಚೇರಿ ಕೆಲಸಗಳಿಗೆ ತೊಡಕಾಗುತ್ತಿದೆ. ಎಲ್ಲರೂ ತಾಲೂಕು ಕೇಂದ್ರದಲ್ಲೇ ಉಳಿದು ಸಿಬ್ಬಂದಿ ಮೇಲೆ ನಿಯಂತ್ರಣವಿರಬೇಕು. ಕಚೇರಿಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಿಸಿ ಯಾವುದೇ ರೀತಿಯ ದೂರು ಬರದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಜಲಜೀವನ ಮಿಷನ್ ಯೋಜನೆಯಡಿ ಸುಮಾರು ೨೦೦ ಕೋಟಿ ರೂ. ಅನುದಾನ ತಂದು ಎಲ್ಲ ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಅಧಿಕಾರಿಗಳ ನಿರಾಸಕ್ತಿಯಿಂದ ಸಂಪೂರ್ಣ ವಿಫಲಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಪೂರ್ಣಗೊಂಡ ಬಹಳಷ್ಟು ಗ್ರಾಮಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಪೈಪ್‌ಲೈನ್‌ಗೆ ಅಗೆದ ಗುಂಡಿಗಳನ್ನು ಸರಿಪಡಿಸಿಲ್ಲ. ಕೆಲವೆಡೆ ಜಲಮೂಲಗಳು ಇಲ್ಲದೆ ಕೆಲಸ ಮಾಡಲಾಗಿದೆ. ಗ್ರಾಮ ಸಂಚಾರ ವೇಳೆ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಕುರಿತ ದೂರುಗಳು ಕೇಳಿಬರುತ್ತಿವೆ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅನೇಕ ಸಲ ಹೇಳಿದರೂ ನಿರ್ಲಕ್ಷಿಸಲಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸುಭಾಷ ಅವರನ್ನು ಎಚ್ಚರಿಸಿದರು.

ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಕಮಲನಗರ ತಾಪಂ ಇಒ ಮಾಣಿಕರಾವ ಪಾಟೀಲ್, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕಲಮನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಜೆಸ್ಕಾಂ ಎಇಇ ರವಿ ಕಾರಬಾರಿ, ಟಿಎಚ್‌ಒ ಡಾ.ಗಾಯತ್ರಿ, ಬಿಇಒ ಟಿ.ಆರ್. ದೊಡ್ಡಿ ಇತರರಿದ್ದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಲೋಕೋಪಯೋಗಿ, ಆರೋಗ್ಯ, ಪಂಚಾಯತ್ ರಾಜ್, ಜೆಸ್ಕಾಂ, ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.

ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ: ಔರಾದ್(ಬಿ) ಹಾಗೂ ಕಮಲನಗರ ತಾಲೂಕಿನ ಎಲ್ಲ ಶಾಲೆಗಳಲ್ಲಿ ಕನ್ನಡ ಬೋಧಿಸುವ ಶಿಕ್ಷಕರನ್ನು ನಿಯೋಜಿಸಬೇಕು. ಕೆಲ ಶಾಲೆಗಳಲ್ಲಿ ೬ ಮತ್ತು ೭ನೇ ತರಗತಿ ಮಕ್ಕಳಿಗೆ ಸರಿಯಾಗಿ ಓದಲು ಮತ್ತು ಬರೆಯಲು ಬಾರದಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಬೇಕು. ಶಿಕ್ಷಣದ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಶಾಲಾ ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ ಒದಗಿಸಲು ಬೇಕಾದಷ್ಟು ಅನುದಾನ ಕೊಡಲು ನಾನು ಸಿದ್ಧ. ಆದರೆ ಉತ್ತಮ ಶಿಕ್ಷಣ ಕೊಡಬೇಕು. ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕೆಂದು ಶಾಸಕ ಚವ್ಹಾಣ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಪಿಡಿಒಗಳಿಗೆ ಸ್ಪಷ್ಟ ಸೂಚನೆ ನೀಡಿ: ಪಿಡಿಒಗಳು ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಭೇಟಿ ನೀಡಿ ನೀರು ಬರುತ್ತಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಕಾಮಗಾರಿ ಅಧೀನಕ್ಕೆ ಪಡೆಯಬೇಕು. ಈ ಬಗ್ಗೆ ಎಲ್ಲ ಪಿಡಿಒಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ತಾಪಂ ಇಒಗೆ ಸೂಚಿಸಿದ ಶಾಸಕ ಚವ್ಹಾಣ್, ಯೋಜನೆ ಬಗ್ಗೆ ಜನರಲ್ಲಿ ವ್ಯಾಪಕ ಆಕ್ರೋಶವಿದ್ದು, ನಿರ್ಲಕ್ಷ್ಯ ಸಹಿಸಲಾಗದು ಎಂದು ಗುಡುಗಿದರು.

ಔರಾದ್ ಪಟ್ಟಣದ ಎಲ್ಲ ವಾರ್ಡ್​ಗಳನ್ನು ಸ್ವಚ್ಛಗೊಳಿಸಬೇಕು. ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು. ಪಟ್ಟಣ ಪಂಚಾಯಿತಿ ವರಮಾನ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕು.
| ಪ್ರಭು ಚವ್ಹಾಣ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net