ರೈತರ ಸಮಸ್ಯೆ ಇತ್ಯರ್ಥಕ್ಕೆ ತ್ರೖೆಮಾಸಿಕ ಸಭೆ

Quarterly meeting to resolve farmers' problems
Published on

ಹಾನಗಲ್ಲ: ರೈತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ತ್ರೖೆಮಾಸಿಕವಾಗಿ ರೈತರ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಭಾವಚಿತ್ರಕ್ಕೆ ಗೌರವ ಅರ್ಪಿಸಿ ಅವರು ಮಾತನಾಡಿದರು.

ಹವಾಮಾನ ವೈಪರೀತ್ಯಗಳಿಂದಾಗಿ ರೈತರ ಸಮಸ್ಯೆಗಳಿಗೆ ಕೊನೆ ಇಲ್ಲದಂತಾಗಿದೆ. ಎಲ್ಲವನ್ನೂ ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳುವ ಸ್ಥಿತಿ ಎದುರಾಗಿದೆ. ರೈತನಿಗೆ ಬಲ ತುಂಬುವ ಆಶಯಗಳ ಸರ್ಕಾರಗಳಿಗಿದ್ದರೂ, ಹಣಕಾಸು ಇಲಾಖೆ ಸಹಕರಿಸುವುದಿಲ್ಲ. 5, 10 ಗುಂಟೆ ಭೂಮಿಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿರುವ ಹಲವು ಸಾಧಕರು ನಮ್ಮ ಮಧ್ಯೆ ಇದ್ದಾರೆ. ಅಂಥವರನ್ನು ಆಹ್ವಾನಿಸಿ, ಮಾರ್ಗದರ್ಶನ ಪಡೆಯಬೇಕು. ರೈತ ಸಮೂಹವನ್ನು ಸಂಕಷ್ಟಗಳಿಂದ ಪಾರು ಮಾಡಲು ಕೃಷಿ ತಜ್ಞರಿಂದ ಚರ್ಚೆ, ಸಂವಾದಗಳು ನಡೆಯಬೇಕಿದೆ. ರೈತರು ಆರ್ಥಿಕ ಸದೃಢತೆ ಸಾಧಿಸಲು ಪರಿಣಿತರಿಂದ ಕಾರ್ಯಾಗಾರ ನಡೆಸಬೇಕು ಎಂದರು.

ತಾಲೂಕಿನಲ್ಲಿ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಏಳೆಂಟು ಸೋಲಾರ್ ಪಂಪ್​ಸೆಟ್ ಪ್ರಾಯೋಗಿಕವಾಗಿ ಪಂಪ್​ಸೆಟ್ ಅಳವಡಿಸಿದರೆ, ಇನ್ನುಳಿದ ರೈತರೂ ಅವುಗಳ ಕಾರ್ಯವೈಖರಿ ಕುರಿತು ಮಾಹಿತಿ ಪಡೆಯುವುದು ಸುಲಭವಾಗಲಿದೆ. ವಿದ್ಯುತ್ ಟಿಸಿ ಸಮಸ್ಯೆಗೂ ಮುಕ್ತಿ ದೊರಕಲಿದೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕೃಷಿ ಸಮಸ್ಯೆಗಳಿಗೆ ಎಲ್ಲ ಇಲಾಖೆ ಅಧಿಕಾರಿಗಳೂ ಕೂಡಲೇ ಸ್ಪಂದಿಸಬೇಕು. ಕೃಷಿಯಲ್ಲಿ ಯಾಂತ್ರೀಕರಣ ಅನಿವಾರ್ಯವಾಗುತ್ತಿದೆ. ಸರ್ಕಾರ ಕೃಷಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಾರ್ತಾಂಡಪ್ಪ ಮಣ್ಣಮ್ಮನವರ, ರೈತ ಸಂಘಟನೆಗಳ ಪ್ರಮುಖರಾದ ಎಂ.ಎಸ್.ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಮಹಾರುದ್ರಪ್ಪ ಕೂಸನೂರ, ಚನ್ನಬಸಪ್ಪ ಹಾವಣಗಿ, ಮಹಲಿಂಗಪ್ಪ ಬಿದರಮಳಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ, ಮಣ್ಣು ವಿಜ್ಞಾನಿ ಡಾ.ರಶ್ಮಿ, ಸುವರ್ಣ ಬಿಷ್ಠಕ್ಕನವರ, ಸಂಗಮೇಶ ಹಕ್ಕಲಪ್ಪನವರ, ಯಂಕಾನಂದ ಪೂಜಾರ, ಗುರುನಾಥ ಗವಾಣೆಕರ, ಪ್ರಿಯಾಂಕಾ ಬೆಟಗೇರಿ, ಎಚ್. ಸಂತೋಷ, ಬಸವರಾಜ ಮಣಕೂರ, ಮಹೇಶ ಕೋಳೂರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net