

ಮೈಸೂರು: ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿರುವ ಇವರಿಬ್ಬರೂ ಐದನೇ ತರಗತಿಯಿಂದಲೂ ಸ್ನೇಹಿತರು. ಆದರೆ ಚಡ್ಡಿ ದೋಸ್ತ್ಗಳಾಗಿದ್ದ ಇವರಲ್ಲೊಬ್ಬ ಮತ್ತೊಬ್ಬನ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ನಂಜನಗೂಡಿನ ತಾಂಡವಪುರದಲ್ಲಿ ಮಂಗಳವಾರ ರಾತ್ರಿ ಈ ಪ್ರಕರಣ ನಡೆದಿದ್ದು, ಇರಿತಕ್ಕೊಳಗಾಗಿರುವ ಸ್ನೇಹಿತ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲ್ಪಟ್ಟಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇರಿತಕ್ಕೆ ಒಳಗಾಗಿರುವ ರೋಹನ್ ಮಂಗಳೂರಿನ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಇರಿದಿರುವ ದಿಲ್ಶಾದ್ ಮೈಸೂರಿನ ಕಾಲೇಜೊಂದರ ಇಂಜಿನಿಯರಿಂಗ್ ವಿದ್ಯಾರ್ಥಿ.
ಪ್ರಕರಣ ನಡೆಯುತ್ತಿದ್ದಂತೆ ದಿಲ್ಶಾದ್ಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದ್ದು, ಆತನೂ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ. ಮಂಗಳವಾರ ರಾತ್ರಿ ಇಬ್ಬರೂ ಲ್ಯಾಪ್ಟಾಪ್ ನೋಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ರಾಹುಲ್ ಕುತ್ತಿಗೆಯನ್ನು ದಿಲ್ಶಾದ್ ಚಾಕುವಿನಿಂದ ಕೊಯ್ದಿದ್ದಾನೆ. ಲ್ಯಾಪ್ಟಾಪ್ ನೋಡುತ್ತಿದ್ದಂತೆ ಏನಾಯಿತು, ಅದರಲ್ಲಿ ಏನಿತ್ತು? ಎಂಬ ಕುತೂಹಲ ಮೂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಪೊಲೀಸರು ಆ ನಿಟ್ಟಿನಲ್ಲೂ ತನಿಖೆಗೆ ಮುಂದಾಗಿದ್ದಾರೆ.