

ಆನೇಕಲ್: ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ಬುಧವಾರ ನಾಲ್ವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೇಂದ್ರದಲ್ಲಿದ್ದವರನ್ನು ಸ್ಥಳಾಂತರ ಮಾಡುವಂತೆ ಹಾಗೂ ಅವಧಿ ಮುಗಿದಿರುವವರನ್ನು ಮನೆಗೆ ಕಳುಹಿಸುವಂತೆ ಕ್ವಾರಂಟೈನಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರದಿಂದ ಬಂದ ವಲಸಿಗರನ್ನು ಅಮೃತಮಹಲ್ ಹಾಸ್ಟೆಲ್‌ನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಈ ಪೈಕಿ ಬುಧವಾರ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಹಾಗೂ ತಹಸೀಲ್ದಾರ್ ಮಹದೇವಯ್ಯ ಭೇಟಿ ನೀಡಿ ಸೋಂಕಿತರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಈ ವೇಳೆ ಕ್ವಾರಂಟೈನ್ ಕೇಂದ್ರವನ್ನು ಸ್ಯಾನಿಟೈಸ್ ಮಾಡಿಲ್ಲ. ನಮಗೆ ಇಲ್ಲಿ ಇರಲು ಸಾಧ್ಯವಿಲ್ಲ, ಸ್ಥಳಾಂತರ ಮಾಡಿ, ಅವಧಿ ಪೂರ್ತಿಯಾದವರಿಗೆ ರಿಪೋರ್ಟ್ ನೀಡಿ ಮನೆಗೆ ಕಳುಹಿಸಿ ಎಂದು ಗಲಾಟೆ ಮಾಡಿದ್ದಾರೆ. ಬಳಿಕ ತಹಸೀಲ್ದಾರ್, ಪೋಲೀಸರು ಮನವೊಲಿಸಿದರು. ಜತೆಗೆ ಸ್ವಾೃಬ್ ಟೆಸ್ಟ್ ನೆಗೆಟಿವ್ ಬಂದ 19 ಜನರನ್ನು ಮನೆಗೆ ಕಳುಹಿಸಿದರು.
ಮಹಾರಾಷ್ಟ್ರದಿಂದ ಬಂದ 49 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. 19 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ. ಉಳಿದವರ ವರದಿ ಬಂದ ನಂತರ ಅವರನ್ನು ಕಳುಹಿಸಿಕೊಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಮಹಿಳೆಗೆ ಕರೊನಾ: ಹುಸ್ಕೂರು ಸಮೀಪದ ಚಿಂತಲ ಮಡಿವಾಳದಲ್ಲಿ 46 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಬುಧವಾರ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಕರೋನಾ ಪರೀಕ್ಷೆ ಮಾಡಲಾಗಿತ್ತು. ಗುರುವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯ ಪತಿ, ಮಗ ಸೇರಿ ಒಟ್ಟು 9 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಚಿಂತಲ ಮಡಿವಾಳದಲ್ಲಿ ಮಹಿಳೆ ಮನೆ ಬಳಿ ಭೇಟಿ ನೀಡಿದ ತಹಸೀಲ್ದಾರ್ ಮಹದೇವಯ್ಯ ಹಾಗೂ ತಾಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್, ಸೋಂಕಿತರ ಮನೆಯ 100 ಮೀಟರ್‌ವರೆಗೆ ಕಂಟೇನ್ಮೆಂಟ್ ವಲಯವೆಂದು ೋಷಿಸಿದ್ದಾರೆ.
ಮಹಿಳೆ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಮನೆಯವರನ್ನು ಹೊರತುಪಡಿಸಿ ಯಾರೊಂದಿಗೂ ಸಂಪರ್ಕ ಹೊಂದಿರಲಿಲ್ಲ. ಆದರೂ ಪಾಸಿಟಿವ್ ಬಂದಿದ್ದು ಹೇಗೆ ಎನ್ನುವುದು ಅಧಿಕಾರಿಗಳಿಗೆ ತಲೆನೋವಾಗಿದೆ.
ಒಂಬತ್ತು ವರ್ಷದ ಬಾಲಕಿಯಲ್ಲಿ ಸೋಂಕು: ನೆಲಮಂಗಲ ತಾಲೂಕಿನ ಬಾಣಸವಾಡಿ ಗ್ರಾಮದ ಒಂಬತ್ತು ವರ್ಷದ ಬಾಲಕಿಯಲ್ಲಿ ಕರೊನಾ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ. ಬಾಲಕಿಯು (ಪಿ-6140) ಸೋಂಕಿತ (ಪಿ-2822) ವ್ಯಕ್ತಿಯ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.