ಇನ್ನು ಸಾಂಸ್ಥಿಕ ಕ್ವಾರಂಟೈನ್ ಇರಲ್ಲ

meeting new
Published on

ಮಂಗಳೂರು: ಮಹಾರಾಷ್ಟ್ರ ಸಹಿತ ಹೊರರಾಜ್ಯಗಳಿಂದ ಬಂದವರನ್ನು ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸುವುದಿಲ್ಲ. ಅದರ ಬದಲಿಗೆ ಅವರವರ ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗುವುದು. ಕಂಟೇನ್ಮೆಂಟ್ ಜೋನ್ ರೂಪುರೇಷೆಯೂ ಬದಲಾಗಲಿದ್ದು, ಪಾಸಿಟಿವ್ ಬಂದವರ ಮನೆಯನ್ನು ಮಾತ್ರ ಸೀಲ್‌ಡೌನ್ ಮಾಡಲಾಗುವುದು.

ಮಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿದ ಮಾಹಿತಿ ಇದು.

ಇನ್ನು ಹೊರರಾಜ್ಯಗಳಿಂದ ಬಂದವರ ಸಹಿತ ಎಲ್ಲರನ್ನು ಕರೊನಾ ಟೆಸ್ಟ್‌ಗೆ ಒಳಪಡಿಸುವುದಿಲ್ಲ. ರೋಗ ಲಕ್ಷಣ ಇದ್ದರೆ ಮಾತ್ರ ಪರೀಕ್ಷೆ ನಡೆಸಲಾಗುವುದು ಮತ್ತು ಪಾಸಿಟಿವ್ ಬಂದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಯಾವುದೇ ರಾಜ್ಯದಿಂದ ಬರುವವರನ್ನು ತಡೆಯಬಾರದು ಎಂದು ಆದೇಶವಿತ್ತಿದೆ. ಬರುತ್ತೇವೆ ಎಂದಾಗ ನಾವು ಕರೆಸಿಕೊಳ್ಳುವುದು ಧರ್ಮ. ಲಕ್ಷಾಂತರ ಮಂದಿ ಹೊರರಾಜ್ಯದಿಂದ ಬರುತ್ತಿರುವಾಗ ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡುವುದು ಸಾಧ್ಯವಿಲ್ಲ, ನಿರ್ವಹಣೆ ಕಷ್ಟ. ಅಲ್ಲದೆ ಹೋಟೆಲ್‌ಗಳೂ ಅವರ ವ್ಯವಹಾರ ನೋಡಬೇಕಿರುವುದರಿಂದ ಪ್ರಾಕ್ಟಿಕಲ್ ಆಗಿ ಇದನ್ನು ಕೈಗೊಳ್ಳಲಾಗದು. ಮೇಲಾಗಿ ಶಂಕಿತರು ಮನೆಯಲ್ಲೇ ಇರುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಮಹಾರಾಷ್ಟ್ರ ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು ಸೂಕ್ತ. ಇಲ್ಲವಾದರೆ ಮುಂದೆ ಕಷ್ಟವಾಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ ಜಿಲ್ಲೆಗೆ ಹೊರ ರಾಜ್ಯಗಳಿಂದ ಬರಲು 9476 ಮಂದಿ ಅರ್ಜಿ ಹಾಕಿದ್ದು, 5,000 ಮಂದಿಗಷ್ಟೇ ಸದ್ಯ ಅನುಮತಿ ನೀಡಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮೇಯರ್ ದಿವಾಕರ್ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಹಾಜರಿದ್ದರು.

ಲ್ಯಾಬ್ ಆರಂಭಿಸದಿದ್ದರೆ ಕ್ರಮ: ದ.ಕ. ಜಿಲ್ಲೆಯಲ್ಲಿನ 4 ಖಾಸಗಿ ಮೆಡಿಕಲ್ ಕಾಲೇಜುಗಳು ಇನ್ನೂ ಕೋವಿಡ್ ಪರೀಕ್ಷಾ ಲ್ಯಾಬ್ ಪ್ರಾರಂಭಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಾ.ಸುಧಾಕರ್, 10 ದಿನದೊಳಗೆ ಲ್ಯಾಬ್ ಪ್ರಾರಂಭಿಸಲೇಬೇಕು ಎಂದರು. ಎಲ್ಲ ವೈದ್ಯಕೀಯ ಕಾಲೇಜುಗಳೂ ಲ್ಯಾಬ್ ಹೊಂದಿರಬೇಕು ಎಂದು ಐಸಿಎಂಆರ್ ನಿರ್ದೇಶನವೇ ಇದೆ. ಪ್ರತಿದಿನ ಕನಿಷ್ಠ 300ರಷ್ಟು ಪರೀಕ್ಷೆ ನಡೆಸಬೇಕು, ಲ್ಯಾಬ್ ಶೀಘ್ರ ಪ್ರಾರಂಭಿಸದೆ ಹೋದರೆ ಅವರ ಪಿಜಿ ವಿದ್ಯಾರ್ಥಿಗಳ ಪ್ರವೇಶಾತಿ ತಡೆಹಿಡಿಯುತ್ತೇನೆ ಎಂದು ಎಚ್ಚರಿಕೆಯಿತ್ತರು.

ರಾಪಿಡ್ ಟೆಸ್ಟ್ ಅನಗತ್ಯ: ಈಗ ನಡೆಸುತ್ತಿರುವ ಗಂಟಲು ದ್ರವ ಮಾದರಿ ಪರೀಕ್ಷೆಯೇ ಸೂಕ್ತವಾಗಿದೆ, ನಮ್ಮಲ್ಲಿ ಎಲ್ಲೂ ಸಮುದಾಯಕ್ಕೆ ಹರಡಿರುವ ಘಟನೆ ಇಲ್ಲ. ಹಾಗಾಗಿ ಪ್ರತಿಕಾಯ ರಾಪಿಡ್ ಪರೀಕ್ಷೆ ನಡೆಸಬೇಕಾದ ಅವಶ್ಯಕತೆ ಇಲ್ಲ ಎಂದು ಸಚಿವರು ತಿಳಿಸಿದರು.

ವಿಮಾನ ನಿಲ್ದಾಣ ನಿಯಮ: ಉಡುಪಿ: ಬೆಂಗಳೂರು ವಿಮಾನ ನಿಲ್ದಾಣದ ಮಾರ್ಗಸೂಚಿಗಳನ್ನೇ ಮಂಗಳೂರು ವಿಮಾನ ನಿಲ್ದಾಣಕ್ಕೂ ಅನ್ವಯಿಸುವ ಬಗ್ಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಸಚಿವ ಡಾ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೊರರಾಜ್ಯಗಳಿಂದ ಬರುವವರು ಬರುವ 48 ಗಂಟೆಯೊಳಗೆ ಸರ್ಕಾರ ಸೂಚಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿ ಕರೊನಾ ಇಲ್ಲ ಎಂಬ ಪ್ರಮಾಣಪತ್ರ ತರಬೇಕು. ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಫೋನ್ ನಂಬರ್, ಹೆಸರು, ವಿಳಾಸ ಇತ್ಯಾದಿ ನೀಡಬೇಕು ಮತ್ತು ಕಡ್ಡಾಯ 5 ದಿನಗಳ ಕ್ವಾರಂಟೈನ್‌ಗೆ ಒಪ್ಪಬೇಕು ಎಂಬುದು ನಿಯಮಗಳು ಎಂದರು.

ರಾಜ್ಯದ ಒಟ್ಟು ಸೋಂಕಿತರಲ್ಲಿ ಶೇ.85ರಷ್ಟು ಮಂದಿಗೆ ರೋಗ ಲಕ್ಷಣ ಕಂಡು ಬಂದಿಲ್ಲ. ಅನೇಕ ವ್ಯಾಧಿಗಳಿಗೆ ಹೋಲಿಸಿದರೆ ಇದು ಮಾರಕ ರೋಗಾಣು ಅಲ್ಲ. ನಮ್ಮಲ್ಲಿ ಮರಣ ಪ್ರಮಾಣ ಶೇ 1.8ರಷ್ಟಿದೆ, ಉಳಿದ ದೇಶಗಳಲ್ಲಿ ಇದು ಶೇ 8ರಷ್ಟಿದೆ. ಸೋಂಕಿತರು ಸಾಮಾಜಿಕ ಕಳಂಕಿತರಲ್ಲ, ಇದು ಸಾಮಾಜಿಕ ಪಿಡುಗು ಅಲ್ಲ. - ಡಾ.ಕೆ.ಸುಧಾಕರ್, ಉನ್ನತ ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net