ಕ್ವಾರಂಟೈನ್ ವ್ಯಕ್ತಿ ಹೊರಬಂದರೆ ಕೇಸ್

24 Jaggu 2-Web
ಬೆಳಗಾವಿ ಡಿಸಿ ಕಚೇರಿಯಲ್ಲಿ ಮಂಗಳವಾರ ತಾಲೂಕುಮಟ್ಟದ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ವಿಡಿಯೋ ಸಂವಾದ ನಡೆಸಿದರು. ಬಿ.ಎಸ್.ಲೋಕೇಶಕುಮಾರ್, ಜಗದೀಶ ಕೆ.ಎಚ್., ಅಮರನಾಥ ರೆಡ್ಡಿ, ಡಾ. ಎಸ್.ವಿ. ಮುನ್ಯಾಳ, ಶಿವಾನಂದ ಭಜಂತ್ರಿ, ಅಶೋಕ ತೇಲಿ, ರವೀಂದ್ರ ಕರಲಿಂಗಣ್ಣವರ ಇತರರು ಇದ್ದರು.
Published on

ಬೆಳಗಾವಿ: ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ತಕ್ಷಣ ಪ್ರಕರಣ ದಾಖಲಿಸಬೇಕು. ಅವರ ಕುಟುಂಬದ ಮೇಲೂ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿ, ಕ್ವಾರಂಟೈನ್‌ಗೆ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಕೂಡಲೇ ಕ್ವಾರಂಟೈನ್ ಇದ್ದವರಿಗೆ ಕಡ್ಡಾಯವಾಗಿ ಸ್ಟಾೃಂಪಿಂಗ್ ಮಾಡಬೇಕು. ಅವರ ಕುಟುಂಬದ ಸದಸ್ಯರಿಗೂ ಕಡ್ಡಾಯವಾಗಿ ಸ್ಟ್ಯಾಂಪಿಂಗ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಹಾಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ವ್ಯಕ್ತಿಗಳ ಮನೆಯ ಮೇಲೆ ಎಚ್ಚರಿಕೆ ಪತ್ರ ಅಂಟಿಸಬೇಕು. ಅಲ್ಲದೆ ಮನೆಗೆ ಪೊಲೀಸ್ ಬೀಟ್ ಸಿಬ್ಬಂದಿ ಕಡ್ಡಾಯವಾಗಿ ದಿನಕ್ಕೆ 2 ಬಾರಿ ಭೇಟಿ ನೀಡಿ ಪರಿಶೀಲಿಸಬೇಕು. ಪಕ್ಕದ ಮನೆಯವರ ದೂರವಾಣಿ ಸಂಖ್ಯೆ ಪಡೆದುಕೊಂಡು ನಿಗಾವಹಿಸಬೇಕು. ತಾಲೂಕು, ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಈ ರೀತಿಯ ಕಾರ್ಯವಿಧಾನ ಪಾಲಿಸಬೇಕು. ಆರೋಗ್ಯ ಇಲಾಖೆ ರಚಿಸಿರುವ ತಂಡಗಳು ಈ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಡಿಸಿ ಸೂಚಿಸಿದರು.

ಕಟ್ಟಡ ಗುರುತಿಸಿ: ಕ್ವಾರಂಟೈನ್ ವ್ಯಕ್ತಿಗಳನ್ನು ಗ್ರಾಮ ಹಾಗೂ ಅಪಾರ್ಟ್‌ಮೆಂಟ್ ಮತ್ತಿತರ ಕಡೆ ಇರಿಸಿಕೊಳ್ಳಲು ಜನರು ವಿರೋಧ ವ್ಯಕ್ತಪಡಿಸಿದರೆ ಅವರಿಗೆ ಪ್ರತ್ಯೇಕ ಸ್ಥಳ ಗುರುತಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜತೆಗೆ ಸಾಮೂಹಿಕ ಕ್ವಾರಂಟೈನ್‌ಗೆ ಅನುಕೂಲವಾಗುವಂತೆ ಸರ್ಕಾರದ ಕಟ್ಟಡಗಳು, ಖಾಸಗಿ ಕಟ್ಟಡ ಹಾಗೂ ಹೋಟೆಲ್ ಅಥವಾ ವಸತಿಗೃಹಗಳನ್ನು ಗುರುತಿಸಿ. ರಜೆ ಇದ್ದರೂ ಯಾವುದೇ ಸಿಬ್ಬಂದಿ ಕೇಂದ್ರ ಸ್ಥಾನ ತೊರೆಯದಂತೆ ಡಿಸಿ ಸೂಚಿಸಿದರು.

ಪ್ರಕರಣ ದಾಖಲಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಲಾಕ್‌ಡೌನ್ ಹಾಗೂ ಕ್ವಾರಂಟೈನ್‌ಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಆದೇಶವನ್ನು ತಪ್ಪದೇ ಪಾಲಿಸಬೇಕು. 144 ಕಲಂ ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರೆ, ಸಾಮೂಹಿಕ ಪ್ರಾರ್ಥನೆ ಸೇರಿ ಜನರು ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸ ಬೇಕು. ಈ ಬಗ್ಗೆ ಎಲ್ಲ ಸಮುದಾಯದವರಿಗೆ ಮಾಹಿತಿ ನೀಡಿ ಮನವೊಲಿಸಬೇಕು ಎಂದು ಎಸ್‌ಪಿ ಸೂಚಿಸಿದರು.

ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವಿ.ಮಾತನಾಡಿ, ಗ್ರಾಮಮಟ್ಟದಲ್ಲಿ ಟಾಸ್ಕ್‌ಫೋರ್ಸ್ ತಂಡಗಳನ್ನು ತಕ್ಷಣ ರಚಿಸಿಕೊಂಡರೆ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾವಹಿಸುವುದು ಸಾಧ್ಯವಾಗಲಿದೆ ಎಂದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಎಂ.ಕೊಡ್ಲಿ ಮಾತನಾಡಿ, ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಅವಕಾಶ ಮಾಡಿಕೊಡಬೇಕು ಎಂದು ಆಯಾ ತಹಸೀಲ್ದಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್, ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ವಿ. ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಇತರರು ಇದ್ದರು. ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅಶೋಕ ತೇಲಿ, ರವೀಂದ್ರ ಕರಲಿಂಗಣ್ಣವರ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net