ಕ್ವಾರಂಟೈನ್ ಕೇಂದ್ರಗಳಾದ ಗ್ರಾಮೀಣ ಶಾಲೆಗಳು

MS Archana - DC RMG
Published on

ರಾಮನಗರ: ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ರಾಜ್ಯದವರನ್ನು ಕ್ವಾರಂಟೈನ್ ಮಾಡಲು ಆಯ್ಕೆ ಮಾಡಿರುವ ಕೇಂದ್ರಗಳಿಗೆ ಸ್ಥಳೀಯವಾಗಿ ವಿರೋಧ ಹೆಚ್ಚಾಗಿರುವ ನಡುವೆಯೇ ಜಿಲ್ಲಾಡಳಿತ ಆಯಾ ಗ್ರಾಮದ ಶಾಲೆಗಳನ್ನೇ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲು ಮುಂದಾಗಿದೆ.

ಹೌದು, ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಸಾವಿರಾರು ಮಂದಿ ಸಿಲುಕಿಕೊಂಡಿದ್ದು, ಇವರನ್ನು ಅವರ ಊರುಗಳಿಗೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈಗಾಗಲೇ ಸಾವಿರಾರು ಮಂದಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಮತ್ತು ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಅಲ್ಲದೆ ವಿದೇಶಗಳಲ್ಲಿದ್ದ ಸಾವಿರಾರು ಮಂದಿಯನ್ನು ಏರ್‌ಲ್‌ಟಿ ಸಹ ಮಾಡಲಾಗುತ್ತಿದೆ.

ಆದರೆ, ಇವರನ್ನು ದೇಶ ಮತ್ತು ರಾಜ್ಯಕ್ಕೆ ಬಂದ ನಂತರ ಕ್ವಾರಂಟೈನ್ ಮಾಡಬೇಕಾದ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗುರುತಿಸಿದ್ದ ಹಾಸ್ಟೆಲ್‌ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲು ಮುಂದಾಗಿತ್ತು. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಶಾಲೆಗಳಲ್ಲೇ ಕ್ವಾರಂಟೈನ್: ಹಾಸ್ಟೆಲ್‌ಗಳಲ್ಲಿ ಹೊರರಾಜ್ಯ ಮತ್ತು ದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಿದರೆ, ಕರೊನಾ ಸೋಂಕು ಹರಡುತ್ತದೆ ಎನ್ನುವ ಆತಂಕದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ತಲೆ ಬಿಸಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಜಿಲ್ಲೆಯ ನಿವಾಸಿಗಳನ್ನು ಅವರ ಸ್ವಗ್ರಾಮದ ಶಾಲೆಗಳಲ್ಲಿಯೇ ಕ್ವಾರಂಟೈನ್ ಮಾಡಲು ನಿರ್ಧರಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಯನ್ನು ಸುಸಜ್ಜಿತ ವಾಗಿಡಲು ಜಿಲ್ಲಾಧಿಕಾರಿ ಸೂಚನೆ ಸಹ ನೀಡಿದ್ದಾರೆ.

ನೋ ಎಂಟ್ರಿ: ಹೊರ ರಾಜ್ಯ ಮತ್ತು ದೇಶದಿಂದ ಬರುವವರನ್ನು ಸುಮ್ಮನೆ ರಾಜ್ಯದೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ. ಸ್ವಾಭಾವಿಕ ನೆಗಡಿ, ಕೆಮ್ಮು ಇದ್ದವರನ್ನೂ ಸಹ ತೀವ್ರ ತಪಾಸಣೆಗೆ ಒಳಪಡಿಸಿ ಅವರನ್ನು ಅಲ್ಲಿಯೇ ನಿಗಾದಲ್ಲಿ ಇಡಲಾಗುತ್ತಿದೆ. ಯಾವುದೇ ರೋಗ ಲಕ್ಷಣವೂ ಇಲ್ಲ ಎಂದು ದೃಢಪಟ್ಟ ಮೇಲೆ ಹಾಗೂ ಪರೀಕ್ಷೆ ವರದಿ ಬಂದ ನಂತರವಷ್ಟೇ ಅಂತಹವರನ್ನು ಅವರ ಗ್ರಾಮದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ಆತಂಕ ಬೇಡ: ಕರೊನಾ ವಿಷಯದಲ್ಲಿ ರಾಮನಗರ ಸುರಕ್ಷಿತವಾಗಿದ್ದು ಜಿಲ್ಲಾಡಳಿತ ಎಲ್ಲ ಕ್ರಮ ಕೈಗೊಂಡಿದೆ. ಈಗಲೂ ಹೊರ ರಾಜ್ಯ ಮತ್ತು ದೇಶದಲ್ಲಿ ಇರುವ ಜಿಲ್ಲೆಯವರನ್ನು ಕರೆತರುವಾಗ ಜಿಲ್ಲಾಡಳಿತದಿಂದ ಮುಂಜಾಗ್ರತೆ ಕೈಗೊಳ್ಳಲಾಗುತ್ತದೆ. ಅಲ್ಲದೆ, ಆಯಾ ಗ್ರಾಮದ ವ್ಯಕ್ತಿಗಳನ್ನು ಅವರ ಸ್ವಗ್ರಾಮದಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತದೆ. ಇದರಿಂದ ಎಲ್ಲರ ಆತಂಕವೂ ದೂರಾಗುತ್ತದೆ. ಕ್ವಾರಂಟೈನ್ ಮಾಡಿದಾಕ್ಷಣ ರೋಗ ಹರಡುತ್ತದೆ ಎನ್ನುವ ಭಯ ಬೇಡ ಎಂದು ಜಿಲ್ಲಾಡಳಿತ ಜನರಿಗೆ ಧೈರ್ಯ ತುಂಬಿದೆ.

ಹೆಚ್ಚಿನ ಜನ ಬಂದಿಲ್ಲ: ಹೊರ ರಾಜ್ಯಕ್ಕೆ ಉದ್ಯೋಗ ಸೇರಿ ವಿವಿಧ ಕಾರಣಗಳಿಗಾಗಿ ತೆರಳಿದ್ದ ಜಿಲ್ಲೆಯ ಸುಮಾರು 60 ಮಂದಿ ರಾಮನಗರಕ್ಕೆ ವಾಪಸ್ ಆಗಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಏರ್‌ಲ್‌ಟಿ ನಂತರ ಈವರೆವಿಗೂ ವಿದೇಶದಿಂದ ಯಾರನ್ನೂ ರಾಮನಗರ ಜಿಲ್ಲೆಗೆ ಕಳುಹಿಸಿಲ್ಲ.

ಸಕ್ರಿಯವಾಗಿದೆ ಕಾರ್ಯಪಡೆ: ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಹೊರ ರಾಜ್ಯಗಳಿಂದ ನುಸುಳಿ ಬರುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಅದೇ ರೀತಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಜಿಲ್ಲೆಗೆ ಬಂದಿದ್ದ ಮೂವರನ್ನು ಗ್ರಾಮಮಟ್ಟದ ಕರೊನಾ ಕಾರ್ಯಪಡೆ ಮೂಲಕ ಪತ್ತೆಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಹೋಗಿದ್ದ ಇವರು ಚೆಕ್‌ಪೋಸ್ಟ್‌ಗಳಲ್ಲಿ ತಪ್ಪಿಸಿಕೊಂಡು ಸ್ವಗ್ರಾಮಗಳಿಗೆ ಬಂದಿದ್ದರು. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಗ್ರಾಪಂ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಕರೊನಾ ಕಾರ್ಯಪಡೆ ಇವರನ್ನು ಪತ್ತೆ ಹಚ್ಚಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿತ್ತು. ಇದರ ಆಧಾರದ ಮೇಲೆ ಇವರನ್ನು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿದೆ.

ಹೊರ ರಾಜ್ಯ ಮತ್ತು ದೇಶದಿಂದ ಬಂದವರನ್ನು ಅವರ ಸ್ವಗ್ರಾಮದಲ್ಲಿನ ಶಾಲೆಗಳಲ್ಲಿಯೇ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಎಲ್ಲರ ಆತಂಕವೂ ದೂರವಾಗುತ್ತದೆ. ಸಣ್ಣ ರೋಗ ಲಕ್ಷಣ ಕಂಡರೂ ಅಂತಹವರನ್ನು ಹೆಚ್ಚಿನ ನಿಗಾದಲ್ಲಿ ಇಡಲಾಗುವುದು. ಯಾರೂ ಭಯಪಡುವ ಅಗತ್ಯವಿಲ್ಲ. ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net