

ಶ್ರವಣಬೆಳಗೊಳ: ಹೊರ ರಾಜ್ಯದಿಂದ ತಾಲೂಕಿಗೆ ಆಗಮಿಸುತ್ತಿರುವವರಿಗೆ ಇಲ್ಲಿನ ಅತಿಥಿ ನಿವಾಸಗಳಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ ಎಂದು ತಹಸೀಲ್ದಾರ್ ಜೆ.ಬಿ.ಮಾರುತಿಗೌಡ ತಿಳಿಸಿದರು.
ತಾಲೂಕಿನಲ್ಲಿ ಈವರೆಗೆ 4 ಕೇಂದ್ರಗಳನ್ನು ತೆರೆಯಲಾಗಿದ್ದು, 300 ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳಾವಕಾಶದ ಅಭಾವ ಉಂಟಾದ ಹಿನ್ನೆಲೆಯಲ್ಲಿ ಅತಿಥಿ ನಿವಾಸಗಳಲ್ಲಿ 5ನೇ ಕೇಂದ್ರ ತೆರೆದು 400 ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಜಯವಾಣಿಗೆ ತಿಳಿಸಿದರು.
ಅತಿಥಿ ನಿವಾಸದ ಎ ಬ್ಲಾಕ್ ಕಟ್ಟಡದಲ್ಲಿ 77 ಕೊಠಡಿ ಹಾಗೂ 8 ಹಾಲ್‌ಗಳು, ಬಿ ಬ್ಲಾಕ್‌ನಲ್ಲಿ 55 ಕೊಠಡಿಗಳು ಹಾಗೂ 3 ಹಾಲ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರಗಳ ಸುತ್ತ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್, ನೋಡಲ್ ಅಧಿಕಾರಿ ಸೋಮನಾಥ್, ಬಿಸಿಎಂ ಅಧಿಕಾರಿ ಸಿ.ಜೆ.ಮಂಜುನಾಥ್, ಉಪ ತಹಸೀಲ್ದಾರ್ ಮರಿಯಯ್ಯ, ಕಂದಾಯ ನಿರೀಕ್ಷಕ ಮೋಹನ್ ಕುಮಾರ್, ಪಿಡಿಒ ಬಾಬು ಹಾಜರಿದ್ದರು.