

ಗುಂಡ್ಲುಪೇಟೆ: ತಾಲೂಕಿನ ಮೇಲುಕಾಮನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 14 ದಿನ ಕ್ವಾರಂಟೈನ್‌ನಲ್ಲಿದ್ದ 15 ಜನರನ್ನು ಗುರುವಾರ ಸಂಜೆ ಅವರವರ ಊರುಗಳಿಗೆ ಕಳುಹಿಸಿಕೊಡಲಾಯಿತು.
ಕೂಲಿಗಾಗಿ ಕೇರಳದ ಎಸ್ಟೇಟ್‌ಗಳಿಗೆ ಹೋಗಿದ್ದ ಕಾರ್ಮಿಕರು ಹಾಗೂ ರಜೆ ಕಳೆಯಲು ಸಂಬಂಧಿಕರ ಮನೆಗೆ ಹೋಗಿದ್ದವರು ಲಾಕ್‌ಡೌನ್‌ನಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಮೇ ಮೊದಲ ವಾರದಲ್ಲಿ ಲಾಕ್‌ಡೌನ್ ಸಡಿಲಗೊಂಡ ನಂತರ ತಮ್ಮ ಮನೆಗಳಿಗೆ ಹಿಂದಿರುಗುವಾಗ ತಾಲೂಕಿನ ಗಡಿಗಳ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿ ಇರಿಸಿದ್ದರು.
ಕ್ವಾರಂಟೈನ್ ಅವಧಿಯಲ್ಲಿ ಯಾರಿಗೂ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದ್ದರಿಂದ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ನಾಲ್ರೋಡಿನ 12 ಜನ ಸೇರಿ ಒಟ್ಟು 15 ಜನರನ್ನು ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಅವರ ಊರುಗಳಿಗೆ ಕಳುಹಿಸಲಾಯಿತು ಎಂದು ತಹಸೀಲ್ದಾರ್ ನಂಜುಂಡಯ್ಯ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಸಮಾಜ ಕಲ್ಯಾಣಾಧಿಕಾರಿ ಪ್ರಮೋದ್ ಕುಮಾರ್, ಹಂಗಳ ನಾಡಕಚೇರಿಯ ಕಂದಾಯಾಧಿಕಾರಿ ರಾಜಕುಮಾರ್, ಗ್ರಾಮಲೆಕ್ಕಿಗ ನದೀಂ ಹುಸೇನ್ ಇತರರು ಇದ್ದರು.