

ಮಸ್ಕಿ: ಚರಂಡಿ ಮತ್ತು ರಸ್ತೆ ವಿಭಜಕ ಕಾಮಗಾರಿ ಕಳಪೆಯಾಗಿದೆ ಎಂದು ಆಪಾದಿಸಿ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳು ಕೈಗೊಂಡಿದ್ದ ಅನಿದಿಷ್ಟಾವಧಿ ಧರಣಿ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಮನವಿ ಆಲಿಸಿದರು. ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ ಒಂದು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹುಬ್ಬಳ್ಳಿಯ ಗುಣ ನಿಯಂತ್ರಕರಿಂದ ತಪಾಸಣೆ ನಡೆಸಿ ಗುಣಮಟ್ಟದ ಕಾಮಗಾರಿ ನಿರ್ವಹಿಸಲಾಗುವುದು. ಮುದಬಾಳ ಕ್ರಾಸ್‌ನಿಂದ ಯರಡೋಣ ಕ್ರಾಸ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ದೋಷಗಳ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಇಇ ವಿಜಯಕುಮಾರ ಭರವಸೆ ನೀಡಿದರು.
ಹಿನ್ನೆಲೆ: ಪಟ್ಟಣದ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೆ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ, ವಿಭಜಕ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ನಿಗದಿಯಂತೆ ಕಾಮಗಾರಿ ಕೈಗೊಳ್ಳುತ್ತಿಲ್ಲ ಹಾಗೂ ಕಡಿಮೆ ಸಾಮರ್ಥ್ಯದ, ಸಿಮೆಂಟ್ ಮತ್ತು ಕಬ್ಬಿಣದ ಸರಳುಗಳನ್ನೂ ಬಳಕೆ ಮಾಡಲಾಗುತ್ತಿದೆ ಎಂಬುದು ಪ್ರಗತಿಪರ ಸಂಘಟನೆಗಳ ಆರೋಪವಾಗಿದೆ. ಈ ಬಗ್ಗೆ ಗುಣಮಟ್ಟ ನಿಯಂತ್ರಕರು ಪರಿಶೀಲನೆ ನಡೆಸಿದ್ದರು. ಅಂದಾಜು ಪಟ್ಟಿಯಂತೆ ಕಾಮವಾರಿ ನಡೆದಿಲ್ಲ ಎಂಬುದನ್ನು ಗುಣಮಟ್ಟ ನಿಯಂತ್ರಕರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೂ, ಕಳಪೆ ಕಾಮಗಾರಿ ಮುಂದಿವರೆಸಿದ್ದರಿಂದ ಪ್ರಗತಿಪರ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು.