

ಅಥಣಿ: ತಾಲೂಕು ಆಸ್ಪತ್ರೆಯಲ್ಲಿ ಜನರು ನಿಂತುಕೊಳ್ಳಲು ಗುಣಮಟ್ಟದ ಶೆಡ್ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಶೀಘ್ರ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅಲ್ಟ್ರಾಸೌಂಡ್ ಯಂತ್ರಕ್ಕೆ ಅಂದಾಜು 15 ಲಕ್ಷ ರೂ. ಹಾಗೂ ಹೆಚ್ಚಿನ ಚಿಕಿತ್ಸೆ ಸಾಮಗ್ರಿಗಳಿಗೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ವೈದ್ಯರು ಹಾಗೂ ಸಿಬ್ಬಂದಿ ಗುಣಮಟ್ಟದ ಸೇವೆಯಿಂದ ಅಥಣಿ ಆಸ್ಪತ್ರೆ ಹೆರಿಗೆ ವಿಭಾಗದಲ್ಲಿ ಜಿಲ್ಲೆಗೆ 3ನೇ ಸ್ಥಾನ ಪಡೆದುಕೊಂಡಿದೆ. ವಾರದಲ್ಲಿ 6 ದಿನ ಕಣ್ಣಿನ ಶಸಚಿಕಿತ್ಸೆ ಮತ್ತು ಡಯಾಲಿಸಿಸ್ ಸೌಕರ್ಯ ನೀಡಲಾಗುವುದು ಎಂದು ವಿವರಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ.ಬಿ.ಜಿ.ಪಾಟೀಲ, ಡಾ.ಚಿದಾನಂದ ಮೇತ್ರಿ, ಡಾ.ವಿಜಯ ಕುರೆನ್ನವರ, ಡಾ.ಮುರುಗೇಶ ಅವಟಿ ಇತರರಿದ್ದರು.