

ಹೊಳೆಆಲೂರ: ಬಹು ದಿನಗಳ ಜನರ ನಿರೀಕ್ಷೆಯಾದ ಗಜೇಂದ್ರಗಡ-ಸೊರಬ ರಸ್ತೆಯನ್ನು ಅತ್ಯಂತ ಗುಣಮಟ್ಟವಾಗಿ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ಹೊಳೆಆಲೂರ ಸಮೀಪದ ಅಸೂಟಿ, ಮಾಳವಾಡ, ಯಾವಗಲ್ಲ ಗ್ರಾಮಗಳಲ್ಲಿ ಮಂಗಳವಾರ ಎಸ್ಎಚ್ಡಿಪಿ ಯೋಜನೆಯಡಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಳವಾಡದಿಂದ ಅಸೂಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು 19.50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಹೊಳೆಆಲೂರ-ಸೋಮನಕಟ್ಟಿ, ಮೇಲ್ಮಠ ರಸ್ತೆ ಅಭಿವೃದ್ಧಿಗೆ 26 ಲಕ್ಷ ರೂ., ಅಸೂಟಿ ಮೇಲ್ಮಠ ಮಧ್ಯದ ಸೇತುವೆ ಕಾಮಗಾರಿ 3.30 ಕೋಟಿ ರೂ., ಕರಮುಡಿ ಮಾಳವಾಡ ಮಧ್ಯದ ಸೇತುವೆ ಕಾಮಗಾರಿ 1.95 ಕೋಟಿ ರೂ., ಯಾವಗಲ್ಲ ಗ್ರಾಮದ ಸಿ.ಸಿ. ರಸ್ತೆ ಅಭಿವೃದ್ಧಿಗೆ 95.42 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ರಸ್ತೆಯ ಕಾಮಗಾರಿ ಗುಣಮಟ್ಟದ ಕುರಿತು ಸಾರ್ವಜನಿಕರು ನನಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಆದರೆ, ವಿನಾಕಾರಣ ರಾಜಕೀಯ ಮಾಡಿ ಕೆಲಸಕ್ಕೆ ಅಡ್ಡಿ ಪಡಿಸಬಾರದು. ಮಲಪ್ರಭಾ ಪ್ರವಾಹದಿಂದ ಹಾನಿ ಅನುಭವಿಸಿದ ನರಗುಂದ ಮತಕ್ಷೇತ್ರದ ಎಲ್ಲ 17 ಗ್ರಾಮಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ದಲ್ಲಿ ಇರುವುದರಿಂದ ಶೇ. 90 ರಷ್ಟು ಅರ್ಹ ಫಲಾನುಭವಿಗಳಿಗೆ ಸಮರ್ಪಕ ನ್ಯಾಯ ಒದಗಿಸಲಾಗಿದೆ ಎಂದರು.
ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ಮಂಡಲ ಮಾಜಿ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಹೊಳೆಆಲೂರ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ತಾ.ಪಂ. ಸದಸ್ಯ ರಾಮನಗೌಡ ಪಾಟೀಲ, ಹೇಮಾವತಿ ಕಡದಳ್ಳಿ, ಮಲ್ಲನಗೌಡ ಪಾಟೀಲ, ಶಿವಯೋಗಿ ನೀಲಗುಂದ, ಮಲ್ಲನಗೌಡ ಬುಡ್ಡನಗೌಡ್ರ, ಶಿವಲಿಂಗಯ್ಯ ಹಿರೇಮಠ, ಬಿ.ಪಿ. ಪಾಟೀಲ, ಶೇಖರಗೌಡ ಪಾಟೀಲ, ಸಂಪತ್ಕುಮಾರ ಕುಲಕರ್ಣಿ, ಫಕೀರಗೌಡ ಫಕೀರಗೌಡ್ರ, ಮಹಾಂತಯ್ಯ ಹೊಸಮಠ ಇತರರಿದ್ದರು.