ಗುಣಮಟ್ಟದ ವಿದ್ಯುತ್ ಪೂರೈಕೆ ಯೋಜನೆಗೆ ಚಾಲನೆ

ಶ್ರೀರಂಗಪಟ್ಟಣ ತಾಲೂಕು ನೇರಳೆಕೆರೆ ಗ್ರಾಮದಲ್ಲಿ ಸೋಮವಾರ ಸೆಸ್ಕ್ ವತಿಯಿಂದ ಹಮ್ಮಿಕೊಂಡಿದ್ದ ರೈತರ ಐಪಿ ಸೆಟ್‌ಗಳಿಗೆ ಪರಿವರ್ತಕಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ರೈತರ ಗೊಂದಲಗಳಿಗೆ ಉತ್ತರಿಸಿದರು. ಕೆ.ಎಂ.ಮುನಿರಾಜಗೋಪಾಲ್ ಇತರರು ಇದ್ದರು.
ಶ್ರೀರಂಗಪಟ್ಟಣ ತಾಲೂಕು ನೇರಳೆಕೆರೆ ಗ್ರಾಮದಲ್ಲಿ ಸೋಮವಾರ ಸೆಸ್ಕ್ ವತಿಯಿಂದ ಹಮ್ಮಿಕೊಂಡಿದ್ದ ರೈತರ ಐಪಿ ಸೆಟ್‌ಗಳಿಗೆ ಪರಿವರ್ತಕಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ರೈತರ ಗೊಂದಲಗಳಿಗೆ ಉತ್ತರಿಸಿದರು. ಕೆ.ಎಂ.ಮುನಿರಾಜಗೋಪಾಲ್ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ರೈತರು ಸೆಸ್ಕ್‌ಗೆ ಕಡ್ಡಾಯವಾಗಿ 22,500 ರೂ. ಪಾವತಿಸಿ ನಿಮ್ಮ ಐ.ಪಿ.ಸೆಟ್‌ಗಳಿಗೆ ಅಧಿಕೃತ ವಿದ್ಯುತ್ ಸಂಪರ್ಕ ಪಡೆದು ಗುಣಮಟ್ಟದ ಪೂರೈಕೆ ಹಾಗೂ ಜೀವ ಸುರಕ್ಷತೆಯೊಂದಿಗೆ ಕೃಷಿ ಮಾಡಬೇಕು ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ಮಂಗಳವಾರ ಸೆಸ್ಕ್ ವತಿಯಿಂದ ಹಮ್ಮಿಕೊಂಡಿದ್ದ ರೈತರ ಕೃಷಿ ಪಂಪ್‌ಸೆಟ್ ಸಮೀಪ ಪರಿವರ್ತಕ (ಟ್ಯಾನ್ಸ್ ಫಾರ್ಮರ್) ಅಳವಡಿಸಿ ಗುಣಮಟ್ಟದ ವಿದ್ಯುತ್ ಪೂರೈಸುವ ಯೋಜನೆಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.

ಕ್ಷೇತ್ರದಲ್ಲಿ ಸೆಸ್ಕ್ ರೈತರ ಕೃಷಿ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಕ್ರಾಂತಿಕಾರಿ ರೂಪದಲ್ಲಿ ಜಾರಿಗೊಳಿಸಿದೆ. ರೈತರ ಸ್ವಾವಲಂಬಿ ಕೃಷಿ ಬದುಕಿಗೆ ಈ ಸುವರ್ಣ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇದರಿಂದ ಐ.ಪಿ.ಸೆಟ್‌ಗಳಿಗೆ ಅಡಚಣೆ ರಹಿತ ಉತ್ತಮ ವಿದ್ಯುತ್ ಪೂರೈಕೆ, ಗುಣಮಟ್ಟದ ವೋಲ್ಟೇಜ್ ಲಭ್ಯತೆ, ಪರಿವರ್ತಕಗಳಲ್ಲಿ ಉಂಟಾಗುವ ದೋಷ ತಡೆಯುವಿಕೆ, ಒವರ್ ಲೋಡ್‌ನಿಂದ ಉಂಟಾಗುವ ಜಂಪರ್ ಕಡಿತ ಮತ್ತು ವಿದ್ಯುತ್ ಕಳ್ಳತನ ಮಾಡುವ ಪ್ರಕರಣಕ್ಕೆ ಕಡಿವಾಣ ಸೇರಿದಂತೆ ಹಲವು ರೀತಿ ಸೌಲಭ್ಯ ಪಡೆಯುವ ಜತೆಗೆ ಮುಖ್ಯವಾಗಿ ಜನ ಮತ್ತು ಜಾನುವಾರುಗಳಿಗೆ ವಿದ್ಯುತ್ ಅವಘಡದಿಂದ ಎದರಾಗುತ್ತಿದ್ದ ಜೀವಹಾನಿಗಳನ್ನು ತಪ್ಪಿಸಬಹುದು ಎಂದರು.

ಹೀಗಾಗಿ ರೈತರು ನಿಮ್ಮ ವ್ಯಾಪ್ತಿಯ ಸೆಸ್ಕ್ ಸಿಬ್ಬಂದಿ ಬಳಿ ಹಣ ಪಾವತಿಸಿ ಕಡ್ಡಾಯವಾಗಿ ನಿಮ್ಮ ಕೃಷಿ ಪಂಪ್ ಸೆಟ್‌ಗಳಿಗೆ ಅಧಿಕೃತ ವಿದ್ಯುತ್ ಸಂಪರ್ಕ ಪಡೆಯಿರಿ. ಇನ್ನು ಗಾಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರಪೀಡಿತ ಪರಿಸ್ಥಿಯನ್ನು ಶಾಶ್ವತವಾಗಿ ಕೊನೆಗೊಳಿಸಲು ಕಾವೇರಿ ನದಿಯಿಂದ 35 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಮೂಲಕ ಈ ವ್ಯಾಪ್ತಿಯ ಕೃಷಿ ಬಳಕೆಗಾಗಿ 12 ಕೆರೆಗಳಿಗೆ ನೀರು ತುಂಬಿಸುವುದು. ಅಲ್ಲದೆ ನೇರಳಕೆರೆ ವ್ಯಾಪ್ತಿಯಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆಗೂ ಸಹ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಮುಂದೆ ಗಾಮನಹಳ್ಳಿ ವ್ಯಾಪ್ತಿಯನ್ನು ಪರಿಗಣಿಸಲಾಗುವುದು ಎಂದರು.

ಶೌರಶಕ್ತಿ ಉತ್ಪಾದನೆಗೆ ಭೂಮಿ ನೀಡಿ: ರಾಜ್ಯಕ್ಕೆ 19ರಿಂದ 20 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಕಿದ್ದು, ಸೆೆಸ್ಕ್ ನಲ್ಲಿ 950 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಮಂಜೂರಾತಿ ನೀಡಿದೆ. ಈಗ ಚಾಮರಾಜನಗರ ಜಿಲ್ಲೆಯಲ್ಲಿ 3 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದ್ದು, ಕೆಲವೇ ತಿಂಗಳಲ್ಲಿ ಸೆಸ್ಕ್ ಸಹ 500 ಮೆಗಾವ್ಯಾಟ್ ಉತ್ಪಾದಿಸಲು ಸಿದ್ಧತೆ ನಡೆಸಿದೆ. 3 ರಿಂದ 4 ಎಕೆರೆ ಜಮೀನು ಬೇಕಿದೆ. ತಾಲೂಕಿನ ಆಲಗೂಡು ಅಥವಾ ಹುಂಜನಕೆರೆ ವ್ಯಾಪ್ತಿಯಲ್ಲಿ ಈಗ ಜಾಗ ವೀಕ್ಷಿಸಲಾಗಿದ್ದು, ಸೆಸ್ಕ್ ಹಸ್ತಾಂತರಗೊಳಿಸಿದ ಬಳಿಕ ಅರಕೆರೆ ಮತ್ತು ಮಾರಸಿಂಗನಹಳ್ಳಿ ಎಂವಿಎಸ್‌ಎಸ್‌ಗೆ ಪೂರೈಕೆ ಸಿಗಲಿದೆ. ಗಾಮನಹಳ್ಳಿ ಪಂಚಾಯಿತಿ ನೀರಾವರಿ ಸಮಸ್ಯೆ ಇದ್ದು, ಈ ವ್ಯಾಪ್ತಿಯಲ್ಲಿ ಯಾರೇ ರೈತರು ಸುಮಾರು 8 ಎಕರೆ ಜಮೀನು ಭೂಮಿಯನ್ನು ಒಟ್ಟುಗೂಡಿಸಿ ಸೆಸ್ಕ್‌ಗೆ ನೀಡಿದಲ್ಲಿ ಅಲ್ಲಿ ಸೌರಶಕ್ತಿ ಉತ್ಪಾದಿಸಿ ಪ್ರತಿವರ್ಷ ರೈತರ ಪ್ರತಿ ಎಕೆರೆಗೆ ತಲಾ 25 ಸಾವಿರ ರೂ. ಬಾಡಿಗೆ ಜತೆಗೆ 2 ವರ್ಷಗಳಿಗೊಮ್ಮೆ ಶೇ.5 ಅಧಿಕಗೊಳಿಸಲಾಗುವುದು ಎಂದರು.

ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿರಾಜಗೋಪಾಲ್ ಮಾತನಾಡಿದರು. ಸೆಸ್ಕ್‌ನ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ನಿಗಮದ ಆಂತರಿಕ ಪರಿಶೋಧನಾ ಮುಖ್ಯ ಆರ್ಥಿಕಾಧಿಕಾರಿ ಲಿಂಗರಾಜಮ್ಮ, ತಾಂತ್ರಿಕ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಶರಣಮ್ಮ, ಖರೀದಿ ನಿಗಮದ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಸೆಸ್ಕ್ ಇಇ ವಿನುತಾ, ಎಇಇ ಮಂಜುನಾಥ್ ಪ್ರಸಾದ್, ತಾಪಂ ಮಾಜಿ ಸದಸ್ಯ ಪಟೇಲ್ ಸುರೇಶ್, ಗ್ರಾ.ಪಂ. ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಮಹಾದೇವಿ, ಗ್ರಾ.ಪಂ. ಸದಸ್ಯರಾದ ಮಹದೇವಸ್ವಾಮಿ, ವೆಂಕಟೇಶ್, ಮಾಜಿ ಪ್ರಧಾನ ತಿಮ್ಮೇಗೌಡ, ಚೇರ್ಮನ್ ಚೆನ್ನಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net