

ಅರಕಲಗೂಡು: ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ನಿಗದಿತ ಗುರಿಸಾಧನೆ ಸಾಧ್ಯ ಎಂದು ಶಾಸಕ ಎ.ಮಂಜು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ನೀಡಿದ ಶಾಲೆಗಳು ಹಾಗೂ ವಿಷಯಾವಾರು ಶೇ.100 ಫಲಿತಾಂಶ ನೀಡಿದ ಶಿಕ್ಷಕರಿಗೆ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರಗತಿ ಪತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯೆಯಿಂದ ಸಮಾಜದ ಬದಲಾವಣೆ ಸಾಧ್ಯ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಬುದ್ಧಿಶಕ್ತಿ ಇದ್ದು ಅದನ್ನು ಪತ್ತೆ ಹಚ್ಚುವ ಕಾರ್ಯ ನಡೆಸಿದಾಗ ಉತ್ತಮ ಸಾಧನೆ ಸಾಧ್ಯ. ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದ್ದ ತಾಲೂಕನ್ನು ನಾಲ್ಕನೇ ಸ್ಥಾನಕ್ಕೆ ಏರಿಸಲು ಶ್ರಮಿಸಿದ ಅಧಿಕಾರಿಗಳು ಮತ್ತು ಶಿಕ್ಷಕರ ಶ್ರಮ ಅಭಿನಂದನೀಯ ಎಂದರು.
ಗುಣಮಟ್ಟ ಶಿಕ್ಷಣ ನೀಡುವ ಜತೆಗೆ ಶೇ.100 ಫಲಿತಾಂಶ ತಂದಿರುವುದು ಅಭಿನಂದನಾರ್ಹ. ಶಿಕ್ಷಹರು ಸತತ ಅಧ್ಯಯನ ಶೀಲರಾಗಿ ಮಕ್ಕಳ ಬುದ್ಧಿಶಕ್ತಿ ಗುರುತಿಸಿ ಅದಕ್ಕೆ ತಕ್ಕಂತೆ ಶಿಕ್ಷಣ ನೀಡುವುದು ಅಗತ್ಯ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಸರ್ಕಾರಿ ಶಾಲೆಗಳಲ್ಲಿ ಕಲಿತವರಾಗಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ. ಮುಂದಿನ ದಿನಗಳಲ್ಲಿ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸುವ ಮೂಲಕ ತಾಲೂಕನ್ನು ಮೊದಲ ಸ್ಥಾನಕ್ಕೆ ಏರಿಸುವಂತೆ ಸಲಹೆ ನೀಡಿದರು.
ಬಿಇಒ ಕೆ.ಪಿ.ನಾರಾಯಣ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 2023- 24ನೇ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ತಾಲೂಕು 2024- 25ನೇ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಈ ಬಾರಿಯೂ ಸೌಹಾರ್ದಯುತವಾಗಿ ಆಯೋಜಿತ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮೊದಲ ಸ್ಥಾನಕ್ಕೇರಲು ಎಲ್ಲ ಶಿಕ್ಷಕರು ಶ್ರಮ ಹಾಕಬೇಕು ಎಂದು ತಿಳಿಸಿದರು.
ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿ, ಮಕ್ಕಳನ್ನು ಸರಿದಾರಿಗೆ ತರುವುದು ತಾಯಿ ಮತ್ತು ಗುರುವಿನಿಂದ ಮಾತ್ರ ಸಾಧ್ಯ. ವಿದ್ಯಾರ್ಥಿ ದಿಸೆಯಲ್ಲಿ ಕೇವಲ ವೈದ್ಯರು, ಇಂಜಿನಿಯರ್ ಆಗಲು ಪ್ರೇರೇಪಿಸದೆ ಅಮೆರಿಕ ಮಾದರಿಯಲ್ಲಿ ಕಂಪನಿಗಳನ್ನು ತೆರೆದು ಉದ್ಯೋಗ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಶೇ. 100 ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರು ಹಾಗೂ ವಿಷವಾರು ಶೇ.100 ಫಲಿತಾಂಶ ನೀಡಿದ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಉದ್ಯಮಿ ಎ.ಆರ್.ಬಾಲಾಜಿ, ವಿಸ್ಡಂ ವ್ಯಾಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಕೀಬ್ ಉರ್ ರೆಹಮಾನ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಲ್. ಜಗದೀಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಪಿ.ಶಂಕರ್ ಮಾತನಾಡಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ದೈಹಿಕ ಪರಿವೀಕ್ಷಕ ನಿಂಗಯ್ಯ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.