ಸಂಡೂರು: ಶಿಕ್ಷಣವು ಜೀವನ ಶೈಲಿಯನ್ನು ಪರಿವರ್ತಿಸುತ್ತಿದ್ದು, ಈ ದಿಶೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸ್ಥಾಪಕ ಟ್ರಸ್ಟಿ ಬಿ.ನಾಗನಗೌಡ ಹೇಳಿದರು.
ತಾಲೂಕಿನ ಕೃಷ್ಣಾನಗರದ ಬಳಿಯ ಬಿಕೆಜಿ ಸಮೂಹ ಸಂಸ್ಥೆಗಳಲ್ಲಿ ಮಂಗಳವಾರ ಆಯೋಜಿಸಿದ್ದ 2024ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಭಾಷೆ, ಶಿಕ್ಷಣ, ಆಹಾರ, ವೇಷ-ಭೂಷಣ, ಸಂಪ್ರದಾಯಗಳು ಶ್ರೀಮಂತವಾಗಿವೆ. ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯ ಶ್ರೀಕೃಷ್ಣನ ಸಾರವು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ವರವಾಗಿದೆ. ಬಹುಮುಖ ಪ್ರತಿಭೆಗಳು ಹಾಗೂ ಹೆಚ್ಚು ಯುವಕರಿರುವ ನಮ್ಮ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಅತ್ಯುತ್ತಮವಾಗಿದ್ದು, ಕಲಿಕೆಯ ಕಡೆ ಗಮನವಿಟ್ಟು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜು ಪ್ರಾಚಾರ್ಯ ಕೆ.ಮೋಹನರಾವ್ ಶಾಲೆಯ ಶೈಕ್ಷಣಿಕ ಪ್ರಗತಿಯನ್ನು ವಿವರಿಸಿದರು. ದೀಪಾವಳಿ, ರಂಜಾನ್, ದುರ್ಗಾಪೂಜೆ, ಜಗನ್ನಾಥ ರಥಯಾತ್ರೆ, ಗಣೇಶ ಚತುರ್ಥಿ ಮತ್ತು ಕ್ರಿಸ್‌ಮಸ್ ಹಬ್ಬಗಳನ್ನು ಬಿಂಬಿಸುವ ನೃತ್ಯ ಮತ್ತು ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಯಕ್ಷಗಾನ, ಪಾರಂಪರಿಕ, ಶಿವತಾಂಡವ, ಜಾನಪದ ನೃತ್ಯ ಪ್ರದರ್ಶನ ವೀಕ್ಷಕರ ಗಮನ ಸೆಳೆದವು. ಜಾಲಿಯನ್ ವಾಲಾಬಾಗ್ ಹತ್ಯಾಕಾಂಡ, ಹನುಮಾನ್ ಚಾಲೀಸಾ, ಏಕಲವ್ಯ ನಾಟಕ, ಯೋಗ, ಮೈಮ್, ಕರಾಟೆ ಪ್ರದರ್ಶನ, ಸಂಗೀತ ಲೈವ್ ಬ್ಯಾಂಡ್ ನೆರೆದವರನ್ನು ರಂಜಿಸಿದವು.
ಬಿಕೆಜಿಯ ಸಂಸ್ಥಾಪಕಿ ಕಮಲಮ್ಮ, ಟ್ರಸ್ಟಿಗಳಾದ ವೀಣಾ ಪಾಟೀಲ, ಬಿ.ನಾಗನಗೌಡ, ಬಸವರಾಜ, ವೀರೇಶ, ಪ್ರಾಂಶುಪಾಲ ಕೆ.ವಿ.ಮೋಹನರಾವ್ ಇತರರಿದ್ದರು.