ಬದುಕು ಸಹನಾಗಲು ಗುಣಮಟ್ಟದ ಶಿಕ್ಷಣ ಮುಖ್ಯ

6 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದುಕು ಉಜ್ವಲವಾಗಲು ಸಾಧ್ಯ. ಅಂತಹ ಶಿಕ್ಷಣವನ್ನು ಜನತಾ ಶಿಕ್ಷಣ ಸಮಿತಿ ನೀಡುತ್ತಿದೆ ಎಂದು ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನತಾ ಶಿಕ್ಷಣ ಸಮಿತಿ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಷ್ಟದ ಸಮಯದಲ್ಲೇ ಸಂಸ್ಥೆ ಆರಂಭಿಸಿ ಹೋರಾಟದ ಮೂಲಕವೇ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಕಾರ್ಯ ಶ್ಲಾಘನೀಯ. ಇತಿಹಾಸ ಪ್ರಜ್ಞೆ ಇರದಿದ್ದರೆ ವರ್ತಮಾನ ಕಟ್ಟಲು ಅಸಾಧ್ಯ. ಹೀಗಾಗಿ ಮಕ್ಕಳು ಇತಿಹಾಸ ನಿರ್ಮಿಸುವಂತಹ ಕಾರ್ಯ ಮಾಡಬೇಕು. ಸೇವೆ, ತ್ಯಾಗದ ಮೂಲಕ ಉತ್ತಮವಾಗಿ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಇನ್ನೂ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಅಹಿಂಸೆ ಹಾಗೂ ಸತ್ಯದ ಮಾರ್ಗದಲ್ಲಿ ಸಾಗುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಜೀವನ ಅನೇಕರಿಗೆ ಅನುಕರಣೀಯ. ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ ನೈತಿಕತೆಯೂ ಮುಖ್ಯ. ಹೀಗಾಗಿ ಮಕ್ಕಳು ವರ್ತನೆ, ನೈತಿಕತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು. ಇಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ, ಸಂಸ್ಥೆ ಹಾಗೂ ತಂದೆ-ತಾಯಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು.
ಜೆಎಸ್‌ಎಸ್ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಡಾ. ನ. ವಜ್ರಕುಮಾರ ಸಮರ್ಪಣಾ ಮನೋಭಾವ ಕಾರಣ. ಸಮಸ್ಯೆಯ ಮಧ್ಯೆಯೂ ಸಂಸ್ಥೆಯನ್ನು ಕಟ್ಟಿದ ಅವರು ಎಲ್ಲರನ್ನೂ ಪ್ರೀತಿ, ಸ್ನೇಹದಿಂದ ಕಾಣುವ ಮೂಲಕ ಸಂಸ್ಥೆ ಉತ್ತುಂಗಕ್ಕೆ ಬೆಳೆಯುವಂತೆ ಮಾಡಿದ್ದಾರೆ ಎಂದರು.
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು, ವ್ಯವಸ್ಥೆ, ಸ್ವಚ್ಛತೆ ಹಾಗೂ ಚಾರಿತ್ರೃಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅಧ್ಯಾಪಕರ ಸೇವೆ, ಜನರ ಪ್ರಿತಿಯಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯ ಎಂದರು.
ಹೇಮಾವತಿ ಹೆಗ್ಗಡೆ ಮಾತನಾಡಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಾಜಿ ಸಂಸದ ಐ.ಜಿ. ಸನದಿ, ಆಡಳಿತ ಮಂಡಳಿ ಸದಸ್ಯರಾದ ಕೇಶವ ದೇಸಾಯಿ, ಕಮಲನಯನ ಮೆಹತಾ, ಹಳೇ ವಿದ್ಯಾರ್ಥಿ ಆನಂದ ತಾಳಿಕೋಟಿ, ಸುಮನ ವಜ್ರಕುಮಾರ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾಡ, ಮಹಾವೀರ ಉಪಾಧ್ಯೆ, ಸೂರಜ್ ಜೈನ, ಜಿನಪ್ಪ ಕುಂದಗೋಳ, ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪಾಲಕರು, ಇತರರು ಇದ್ದರು.
ಕೃತಿಗಳ ಬಿಡುಗಡೆ: ಸಮಾರಂಭದಲ್ಲಿ ಸುವರ್ಣಸಿರಿ ಸ್ಮರಣ ಸಂಚಿಕೆಯನ್ನು ಜೆಎಸ್‌ಎಸ್ ಉಪ ಕಾರ್ಯಾಧ್ಯಕ್ಷ ಡಾ. ಎಂ.ಎನ್. ತಾವರಗೇರಿ, ಮಗಳಿಗೊಂದು ಪತ್ರ ಕೃತಿಯನ್ನು ಧರ್ಮಸ್ಥಳ ಟ್ರಸ್ಟಿ ಹೇಮಾವತಿ ಹೆಗ್ಗಡೆ ಹಾಗೂ ಜೆಎಸ್‌ಎಸ್ ಅಂತರಂಗ ಕೃತಿಯನ್ನು ಶ್ರದ್ಧಾ ಹೆಗ್ಗಡೆ ಬಿಡುಗಡೆ ಮಾಡಿದರು.
ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.

ಮನುಷ್ಯನ ಭವಿಷ್ಯವನ್ನು ಜಾತಕ ನೋಡಿ ನಿರ್ಧರಿಸಲಾಗುತ್ತದೆ. ಆದರೆ ಸಮಾಜದ ಭವಿಷ್ಯ ಮಕ್ಕಳಿಂದ ತೀರ್ಮಾನಿಸಲಾಗುತ್ತದೆ. ಮಕ್ಕಳು ಖುಷಿಯಾಗಿದ್ದರೆ ಅಲ್ಲಿನ ಸಮಾಜಕ್ಕೆ ಒಳ್ಳೆ ಭವಿಷ್ಯ ಇರಲಿದೆ. ಇಂತಹ ವಾತಾವರಣ ಜೆಎಸ್‌ಎಸ್‌ನಲ್ಲಿದ್ದು, ಇಲ್ಲಿನ ಮಕ್ಕಳಿಗೆ ಉತ್ತಮ ಭವಿಷ್ಯ ಇದೆ. 22 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆ ಇನ್ನೂ ಹೆಚ್ಚಿನ ಶಾಖೆಗಳೊಂದಿಗೆ ಸಮಾಜಕ್ಕೆ ಇನ್ನಷ್ಟು ಸೇವೆ ನೀಡುವಂತಾಗಲಿ. ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಜೆಎಸ್‌ಎಸ್ ಆಡಳಿತ ಮಂಡಳಿ ಅಧ್ಯಕ್ಷರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net