

ಬಾದಾಮಿ: ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡುತ್ತಿದ್ದಾರೆ. ಆದರೆ ಕೆಲವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮಕ್ಕಳು ಪಾಲಕರು ಸ್ಪಷ್ಟನೆ ನೀಡಿದರು.
ಚಿಕ್ಕಮುಚ್ಚಳಗುಡ್ಡ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪಾಲಕರ ಸಭೆಯ ನಂತರ ಮಾತನಾಡಿದ ಪಾಲಕ ಚಿದಾನಂದ ತಳವಾರ, ಎಸ್‌ಡಿಎಂಸಿ ಬದಲಾವಣೆ ಮಾಡಬೇಕು ಎಂದು ಕೆಲವರು ಹೇಳಿದ್ದಾರೆ. ಶಾಲೆಗೆ ಬಂದಿರುವ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡಿದ್ದಾರೆ ಎಂದರು.
ಶಿಕ್ಷಕರು ಸರಿಯಾಗಿ ಬೋಧನೆ ಮಾಡಿದ ಕಾರಣ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 76 ಮಕ್ಕಳಲ್ಲಿ 40 ಮಕ್ಕಳು ಡಿಸ್ಟಿಂಕ್ಷನ್, 30 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.
8ನೇ ತರಗತಿಯಲ್ಲಿ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿ 25 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದಾರೆ. ಅವರಿಗೆ ಪ್ರತಿ ತಿಂಗಳು ಮಾಸಿಕ 1 ಸಾವಿರ ರೂ. ನಾಲ್ಕು ವರ್ಷ ವಿದ್ಯಾರ್ಥಿ ವೇತನ ಕೇಂದ್ರ ಸರ್ಕಾರ ನೀಡುತ್ತದೆ. ಕಳೆದ 10 ವರ್ಷಗಳಿಂದ ಹೆಚ್ಚಿನ ಮಕ್ಕಳು ಆಯ್ಕೆಯಾಗಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆ ಪ್ರಾರಂಭವಾಗಿನಿಂದಲೂ ತಾಲೂಕಿನಲ್ಲಿ ಪ್ರಥಮ, ದ್ವಿತೀಯ, 2020-21ನೇ ಸಾಲಿನಲ್ಲಿ 625ಕ್ಕೆ 620 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದಿದೆ. ಕ್ರೀಡೆಯಲ್ಲಿ ಸತತ 10 ವರ್ಷಗಳಿಂದ ಚದುರಂಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ವಾಲಿಬಾಲ್, ಕ್ರಿಕೆಟ್‌ನಲ್ಲಿ 2024-25ನೇ ಸಾಲಿನಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ್ದಾರೆ. ಸಂಗೀತ ಸ್ಫರ್ಧೆಯಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸತತವಾಗಿ 12 ಬಾರಿ ಭಾಗವಹಿಸಿದ್ದಾರೆ. ಒಂದು ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಾತ್ರಾಭಿನಯದಲ್ಲಿ ಸ್ಫರ್ಧೆಯಲ್ಲಿ 6 ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಒಂದು ಬಾರಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಪಾಲಕರು ಸ್ಪಷ್ಟನೆ ನೀಡಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಶ್ರಮದಿಂದ ತಾಲೂಕಿನ ಚಿಕ್ಕಮುಚ್ಚಳಗುಡ್ಡದಲ್ಲಿ ಆದರ್ಶ ಪಿಯು ಕಾಲೇಜು ಮಂಜೂರಾಗಿದೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ, ಆಟದ ಮೈದಾನ, ಅರ್ಹ ವಿದ್ಯಾರ್ಹತೆಯ ಶಿಕ್ಷಕರು ಇದ್ದಾರೆ. ಶಾಲೆಯ ಮಕ್ಕಳಿಗಾಗಿ 5 ಬಸ್ ಕಲ್ಪಿಸಲಾಗಿದೆ. ಕಳೆದ ವಾರ ದುರ್ಘಟನೆ ನಡೆದಿರುವುದು ಆಕಸ್ಮಿಕ. ಮುಂದೆ ಇಂತಹ ಘಟನೆಗಳು ಜರುಗದಂತೆ ಮುನ್ನಚ್ಚರಿಕೆ ವಹಿಸಲು ಶಿಕ್ಷಕರಿಗೆ ತಿಳಿಸಲಾಗಿದೆ. ಇಲ್ಲಿನ ಕೆಲವು ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, ವರ್ಗಾವಣೆ ಅರ್ಜಿ ಹಿಂತೆಗೆಯಲು ಮನವಿ ಮಾಡಲಾಗಿದೆ. ಇಲ್ಲಿಂದ ಯಾವ ಮಕ್ಕಳು ಬೇರೆ ಶಾಲೆಗೆ ಟಿಸಿ ಪಡೆದುಕೊಂಡು ಹೋಗಿಲ್ಲ ಎಂದು ಪಾಲಕರು ಸ್ಪಷ್ಟನೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಪಾಲಕರಾದ ಹನಮಂತಗೌಡ ಗೌಡರ, ವಿನಾಯಕ ಕಿತ್ತೂರ, ವಿಠ್ಠಲ ಹನಮಸಾಗರ, ರತ್ನಾ ವಡ್ಡರ, ಪ್ರಶಾಂತ ಮಲಿಮಠ, ಲಕ್ಷ್ಮೀಬಾಯಿ ಹುಲ್ಲನ್ನವರ, ಚಿದಾನಂದ ನೀಲಗುಂದ, ಮಹಿಬೂಬ ಜನ್ನತಖಾನ, ರಾಜಶ್ರೀ ಹೂಗಾರ, ಉಮಾ ಭಾವಿಕಟ್ಟಿ, ಗೀತಾ ಕಲಕೇರಿ ಇದ್ದರು.