

ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಸಿನಿಮಾ ನಟ-ನಟಿಯರನ್ನು ಅನುಕರಿಸುವುದರಿಂದ ಬದುಕಿನ ದಾರಿ ತಪ್ಪುತ್ತಿದೆ. ಪಾಲಕರೇ ನಿಜವಾದ ಹೀರೋಗಳು ಎಂಬುದನ್ನು ಅರಿಯಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಜನ್ಮದಿನ ಅಂಗವಾಗಿ ಪಟ್ಟಣದಲ್ಲಿ ಶಿಕ್ಷಣ ಇಲಾಖೆ ಹಾಗೂ ತ್ಯಾಗಭೂಮಿ ಸೇವಾ ಟ್ರಸ್ಟ್ ಶನಿವಾರ ಆಯೋಜಿಸಿದ್ದ ವಿಜ್ಞಾನ ಕಾರ್ಯಾಗಾರ ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು. ಪಾಲಕರದು ಒಂದು ಕನಸು ಇರುತ್ತದೆ. ಅದರಂತೆ ನಿಮಗೂ ಒಂದು ಗುರಿ ಇರಬೇಕು. ಆಗಲೇ ಸಾಧನೆ ಮಾಡಲು ಸಾಧ್ಯ. ಡಾ.ಅಬ್ದುಲ್ ಕಲಾಂ ಭಾರತದ ರಾಷ್ಟ್ರಪತಿಯಾಗಲು ಅವರ ಜ್ಞಾನವೇ ಕಾರಣ. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಚೆನ್ನಾಗಿ ಓದಿ ವಿಜ್ಞಾನಿಗಳಾಗಿ ಪಾಲಕರು, ಶಾಲಾ-ಕಾಲೇಜಿಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ಇಸ್ರೋ ವಿಜ್ಞಾನಿ ಶ್ರೀನಾಥ್ ರತ್ನಾಕರ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಮೌಲ್ಯದಿಂದ ಕೂಡಿರುತ್ತದೆ. ಕಳೆದುಕೊಳ್ಳುವ ಸಮಯ ಮತ್ತೆ ನಿಮ್ಮ ಜೀವನದಲ್ಲಿ ಸಿಗುವುದಿಲ್ಲ. ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು, ಪಾಲಕರ ಸಹಕಾರದೊಂದಿಗೆ ಉನ್ನತ ವ್ಯಾಸಂಗ ಮಾಡಿ ವಿಜ್ಞಾನಿಗಳಾಗುವ ಮೂಲಕ ಸದೃಢ ರಾಷ್ಟ್ರ ಕಟ್ಟಲು ಕೈಜೋಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ತ್ಯಾಗಭೂಮಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ, ಅಧ್ಯಕ್ಷ ಉಪ್ಪಾರ ಅಶೋಕ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ತಹಸೀಲ್ದಾರ್ ಆರ್.ಕವಿತಾ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಾರ್ಯದರ್ಶಿಗಳಾದ ಬಿ.ಬಸವನಗೌಡ್ರು, ಕೋರಗಲ್ ರಾಘವೇಂದ್ರ, ಕಾರ್ಯದರ್ಶಿ ಯು.ವೀರೇಶ, ಶಿಕ್ಷಕರಾದ ಆನಂದ್ ಕಡ್ಲಿ, ಕೊಟ್ರೇಶ್ ತಳವಾರ್, ಸಂಚಿ ಶಿವಣ್ಣ, ಗುರುಬಸವರಾಜ್ ಇದ್ದರು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.