

ಮದ್ದೂರು: ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ದೊರಕುತ್ತಿದ್ದು, ಆ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು ತಿಳಿಸಿದರು.
ತಾಲೂಕಿನ ಹೆಮ್ಮನಹಳ್ಳಿಯ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಜತೆಗೆ ಜೀವನದಲ್ಲಿ ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ, ಆಚಾರ ಹಾಗೂ ವಿಚಾರಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
ಜ್ಞಾನದ ದೇವತೆಯಾದ ಸರಸ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರತಿ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದರು.
ವಿದ್ಯೆ ಯಾರೂ ಕದಿಯಲಾಗದ ಆಸ್ತಿಯಾಗಿದ್ದು, ಪಾಲಕರು ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಜಗತ್ತಿನಲ್ಲಿ ಶಿಕ್ಷಣಕ್ಕೆ ಮಹತ್ತರವಾದ ಶಕ್ತಿಯಿದ್ದು, ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಮಾತನಾಡಿ, ಶಾಲೆಯಲ್ಲಿ ನಿರಂತರವಾಗಿ ಯೋಗ ಶಿಬಿರ, ಪರಿಸರ ದಿನಾಚರಣೆ, ಮಕ್ಕಳ ಸಂತೆ, ಪ್ರತಿಭಾ ಕಾರಂಜಿ, ವಸ್ತು ಪ್ರದರ್ಶನ, ಅಕ್ಷರ ಅಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿ ಗಮನ ಸೆಳೆದರು. ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಚಿಕ್ಕಂಕನಹಳ್ಳಿ ನಂದಿ ಬಸವೇಶ್ವರ ದೇಗುಲದ ಪ್ರಧಾನ ಅರ್ಚಕ ಕಲ್ಲೇಶ್ ವಹಿಸಿದ್ದರು. ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಶಿಕ್ಷಕರಾದ ರಶ್ಮಿತಾ, ನಿಶ್ಚಿತಾ, ಮಮತಾ, ಕಾವ್ಯಾ, ರಾಜೇಶ್ವರಿ, ವಿನೋದಾ, ದೀಪಿಕಾ, ಜಯವಾಣಿ, ರಂಗನಾಥ್, ಶ್ರುತಿ, ಸುಪ್ರೀತಾ ಇತರರು ಇದ್ದರು.