ಗುಣಾತ್ಮಕ ಸಂಶೋಧನೆಗೆ ಅಪಾರ ಬೇಡಿಕೆ

IMG20250227205430.jpg
Published on

ಬೆಳಗಾವಿ: ಸಂಶೋಧನಾ ಚಟುವಟಿಕೆಗೆ ಧನಸಹಾಯ ಮಾಡುವ ಅನೇಕ ಸಂಸ್ಥೆಗಳು ದೇಶದಲ್ಲಿವೆ. ಅಂತಹ ಸಂಸ್ಥೆಗಳಿಗೆ ಸಂಶೋಧಕರು ಸರಿಯಾದ ಕ್ರಮದಲ್ಲಿ ಸಂಶೋಧನಾ ಪ್ರಸ್ತಾವನೆ ಮತ್ತು ರೂಪುರೇಷೆ ಸಲ್ಲಿಸುತ್ತಿಲ್ಲ. ಹೀಗಾಗಿ ಅವು ತಿರಸ್ಕೃತಗೊಳ್ಳುತ್ತಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ಗುರುವಾರ ಆಯೋಜಿಸಿದ್ದ ಭಾರತದಲ್ಲಿನ ಧನಸಹಾಯ ಸಂಸ್ಥೆಗಳಿಗೆ ಪರಿಣಾಮಕಾರಿ ಸಂಶೋಧನಾ ಪ್ರಸ್ತಾವಗಳ ರಚನೆ ಮತ್ತು ಅದರ ರೂಪುರೇಷೆಗಳ ವಿಧಾನಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಆಳವಾದ, ಗುಣಾತ್ಮಕ ಸಂಶೋಧನೆಗೆ ಬೇಡಿಕೆಯಿದೆ. ಸತ್ಯದ ಶೋಧನೆಯೇ ಸಂಶೋಧನೆಯ ಉಸಿರು ಎಂದರು.

ದೇಶಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನೆಗೆ ಹೆಚ್ಚು ಮಹತ್ವ ನೀಡಿದರೆ, ವಿದೇಶಿ ಶಿಕ್ಷಣ ಸಂಸ್ಥೆಗಳು ಚರ್ಚೆ, ವಿಮರ್ಶೆಗೆ ಹೆಚ್ಚು ಮಹತ್ವ ನೀಡುತ್ತವೆ. ಇಂದಿನ ಬಹುತೇಕ ಸಂಶೋಧನೆಗಳು ಪದವಿಗಾಗಿ ಇವೆ. ಮನುಕುಲದ ಒಳಿತು, ಸಮಾಜದ ಉನ್ನತಿಗಾಗಿ ಮಾಡಿದ ಸಂಶೋಧನೆ ಗಟ್ಟಿಯಾಗಿ ಉಳಿಯುತ್ತವೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ. ಬಸವರಾಜ ಬೆಣ್ಣಿ ಪ್ರಾಸ್ತಾವಿಕ ಮಾತನಾಡಿ, ಸಂಶೋಧನೆ ಮೇಲೆ ಪ್ರೀತಿ ಇದ್ದರೆ ಅದು ನಮ್ಮನ್ನು ಮುಂದುವರಿಯುವಂತೆ ಮಾಡಿ, ಉತ್ತಮ ಫಲಿತಾಂಶ ಹೊರಬರುವಂತೆ ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ ಎಂ.ಜಿ. ಹೆಗಡೆ, ವಾಣಿಜ್ಯ ವಿಷಯದ ಪರಿಕಲ್ಪನೆ 130 ವರ್ಷಗಳ ಹಿಂದೆ ಬಂದಿದೆ. ಅದಕ್ಕೆ ತಕ್ಕಂತೆ ಪಠ್ಯಕ್ರಮ ಸಿದ್ಧವಾಯಿತು. ಬದಲಾದ ಕಾಲಘಟ್ಟದಲ್ಲಿ ನಾವು ಅದರ ಮಾನಸಿಕ ಸ್ಥಿತಿಯಿಂದ ಹೊರಬಂದಿಲ್ಲ. ಸಂಶೋಧನೆ ಎಂಬುದು ನೈಸರ್ಗಿಕ ಪ್ರಕ್ರಿಯೆ. ಅದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದೆ. ಅದಕ್ಕೆ ಪದವಿ, ಇನ್ನಿತರ ಅರ್ಹತೆ ಬೇಕಿಲ್ಲ ಎಂದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಮುಕುಂದ ಮುಂಡರಗಿ ಸ್ವಾಗತಿಸಿದರು. ಉಪನ್ಯಾಸಕಿ ಸನಾ ಯಾದವಾಡ ಪರಿಚಯಿಸಿದರು. ಉಪನ್ಯಾಸಕ ರಾಘವೇಂದ್ರ ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net