ಗುಣಾತ್ಮಕ ಶಿಕ್ಷಣ ಇಂದಿನ ಅಗತ್ಯ

4 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಂದಿನ ಪೀಳಿಗೆಗೆ ತಾತ್ವಿಕ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಿದೆ. ವಿದ್ಯಾರ್ಥಿಗಳಲ್ಲಿ ಆದರ್ಶಗಳನ್ನು ಬೆಳಸುವ ಶಿಕ್ಷಣದ ಅವಶ್ಯಕತೆ ಇದೆ. ಇಂದು ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವುದು ನೋವಿನ ಸಂಗತಿ ಎಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಕುಲಪತಿ ಸಿ.ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ವತಿಯಿಂದ ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರೇರಣಾ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಶ್ರೇಷ್ಠ ಪದ್ಧತಿ ಆಗಿತ್ತು. ಅದು ಗುರು ಮತ್ತು ಶಿಷ್ಯರ ಸಂಬಂಧ, ಶಿಷ್ಯಂದಿರನ್ನು ಬೆಳೆಸುವ ರೀತಿ ಸ್ಮರಣೀಯ. ಆದರೆ ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಖಾನೆಗಳಾಗಿವೆ. ಎಲ್ಲಕ್ಕಿಂತ ಮುಖ್ಯ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರು.
ವಿದ್ಯಾರ್ಥಿಗಳನ್ನು ಮಕ್ಕಳಂತೆ ಪ್ರೀತಿಸುವ ಗುಣ ಶಿಕ್ಷಕರಲ್ಲಿರಬೇಕಲ್ಲದೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಶಿಕ್ಷಕರನ್ನು ಮೀರಿಸುವಂತೆ ವಿದ್ಯಾರ್ಥಿಗಳು ಬೆಳೆಯಬೇಕು. ಆದರೆ ಇಂದು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಕೆಲಸ ಮಾತ್ರ ನಡೆದಿದ್ದು, ಜ್ಞಾನ ಅಂಕಪಟ್ಟಿಗೆ ಸೀಮಿತವಾಗಿರುವುದು ವಿಪರ್ಯಾಸ ಎಂದರು.
ಕವಿವಿ ವಿಶ್ರಾಂತ ಕುಲಪತಿ ಪ್ರೊ. ಪ್ರಮೋದ ಗಾಯಿ ಮಾತನಾಡಿ, ಶಿಕ್ಷಕರು ನನಗೆ ಮಾರ್ಗದರ್ಶಕರಾಗಿದ್ದು, ಇಂದಿಗೂ ನಾನು ಶಿಕ್ಷಕ ವೃತ್ತಿ ಮುಂದುವರೆಸಿದ್ದೇನೆ. ಶಿಕ್ಷಕ ವೃತ್ತಿ, ಬೋಧಿಸುವ ವಿಷಯವನ್ನು ಶಿಕ್ಷಕ ಸದಾ ಪ್ರೀತಿಸಿದಾಗಲೇ ನಿಜವಾದ ಶಿಕ್ಷಕನಾಗಲು ಸಾಧ್ಯ ಎಂದರು.
ಕಾಲೇಜು ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಮಾತನಾಡಿದರು. ವಿಶೇಷ ಸಾಧನೆ ಮಾಡಿದ ವಿಶ್ವ ವಿದ್ಯಾಲಯದ ಮತ್ತು ಕಾಲೇಜಿನ ಪ್ರಾಧ್ಯಾಪಕರನ್ನು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಪಿಎಚ್​.ಡಿ ಪದವಿ ಪಡೆದವರಿಗೆ ಸನ್ಮಾನಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ. ಮೋಹನ ಸಿದ್ದಾಂತಿ, ಪ್ರೊ. ಎಸ್​.ಟಿ. ನಂದಿಬೇವೂರ, ಪ್ರೊ. ಸುಧಾ ಕೌಜಗೇರಿ, ಪ್ರೊ. ರವೀಂದ್ರ ಕಾಂಬಳೆ, ಡಾ. ರಾಧಾ ರಾಮದುರ್ಗ, ಡಾ. ಕಮಲಾ ಢವಳೆ, ಡಾ. ಶಿವಾನಂದ ಬುಳ್ಳಾ, ಡಾ. ಶ್ರೀಪಾಲ ಕುರಕುರೆ, ಡಾ. ರಮೇಶ ಶಂಕರೆಡ್ಡಿ, ಡಾ. ಪ್ರಶಾಂತ ಮಾಂಡ್ರೆ, ಡಾ. ರಮೇಶ. ಜಿ.ಕೆ, ಡಾ. ಮಂಜುನಾಥ ಪಾಟೀಲ, ಡಾ.ಸವಿತಾ ನಾಯಕ, ಡಾ. ವಿನಾಯಕ ಡಾವಣೆ, ಡಾ.ಲಿಂಗರಾಜ ಹೊರಕೇರಿ, ಪ್ರೊ.ನಾರಾಯಣ ಉಪಾಧ್ಯೆ, ಪ್ರೊ.ಬಸವರಾಜ ಗಾಡಗೆ ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿ.ಸಿ. ಗುಮ್ಮಗೋಳಮಠ, ಡಾ. ಜಯಾನಂದ ಹಟ್ಟಿ, ಡಾ. ಸಿ.ವಿ. ಮರಿದೇವರಮಠ, ಪ್ರೊ. ಶೈಲಜಾ ಹುದ್ದಾರ, ಬಸವರಾಜ ಗಾಡಗೆ, ಡಾ. ಸಂದೀಪ ಬೂದಿಹಾಳ, ಡಾ. ಸುಭಾಸಚಂದ್ರ ನಾಟೀಕಾರ, ಡಾ. ಮೋತಿಲಾಲ್​ ರಾಠೋಡ, ಪ್ರಾಧ್ಯಾಪಕರು, ಇತರರು ಇದ್ದರು.
ಜಿ.ಕೆ. ಬಡಿಗೇರ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net