

ಆನೇಕಲ್: ಪಟ್ಟಣದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಥಳಿ ರಸ್ತೆಯನ್ನು ಚತುಷ್ಪಥವಾಗಿಸುವ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ಕುಂಟುತ್ತ ಸಾಗಲು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕಾಮಗಾರಿಯನ್ನು ವರ್ಷದ ಹಿಂದೆ ಆರಂಭಿಸಿದ್ದ ಗುತ್ತಿಗೆದಾರರು, ಆನೇಕಲ್‌ನಿಂದ ಸೋಲೂರಿನವರೆಗೆ ರಸ್ತೆ ಅಗೆದಿದ್ದಾರೆ. ಇನ್ನೊಂದೆಡೆ ಕಳನಾಯಕನಹಳ್ಳಿಯಿಂದ ಸೋಲೂರುವರೆಗೆ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಿ ಬಿಟ್ಟಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿವೆ. ಜತೆಗೆ ಭಾರಿ ವಾಹನಗಳು ಸಾಗುವಾಗ ಧೂಳು ಏಳುವುದರಿಂದ, ಇತರ ಸವಾರರು ವಾಹನ ಚಾಲನೆ ಮಾಡಲು ಪಡಿಪಾಟಲು ಅನುಭವಿಸುವಂತಾಗಿದೆ.
ಚಕಾರ ಎತ್ತದ ಜನಪ್ರತಿನಿಧಿಗಳು: ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ, ಮಳೆ ಬಂದಾಗ ರಸ್ತೆ ಕೆಸರುಮಯವಾಗುತ್ತದೆ. ಬಿಸಿಲು ಬಂದಾಗ ಧೂಳು ಏಳುತ್ತದೆ. ಕಾಮಗಾರಿಗೆ ಅಡ್ಡವಾಗಿರುವ ಮರ, ವಿದ್ಯುತ್ ಕಂಬ ತೆರವುಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತಾಲೂಕು ಆಡಳಿತದ್ದಾಗಿದೆ. ಆದರೆ, ಅಧಿಕಾರಿಗಳಾಗಲಿ, ಶಾಸಕರು, ಸಂಸತ್ ಸದಸ್ಯರಾಗಲಿ ಈ ಬಗ್ಗೆ ಚಕಾರ ಎತ್ತದೇ ಇರುವುದು ಶೋಚನೀಯ.
ಅರೆಬರೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡವರ ಲೆಕ್ಕವೇ ಇಲ್ಲ. ತಮಿಳುನಾಡಿನ ಗುಮ್ಮಳಾಪುರ, ಆನೇಕಲ್‌ನ ಸೋಲೂರು, ವಣಕನಹಳ್ಳಿ, ಕಾಳನಾಯಕನಹಳ್ಳಿ, ಮೆಣಸಿಗನಹಳ್ಳಿ ಸೇರಿ ಬಹುತೇಕ ಎಲ್ಲ ಗ್ರಾಮದ ರೈತರಿಗೆ ಈ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿ. ರಸ್ತೆಯ ಎರಡು ಬದಿಗಳಲ್ಲಿ ಹಳ್ಳವನ್ನು ತೋಡಿ ಹಾಗೇ ಬಿಡಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಹಳ್ಳಕ್ಕೆ ಬೀಳುತ್ತವೆ. ಆರ್.ದೇವರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಿಧಾನವಾಗಿ ಸಾಗುವ ವಾಹನಗಳನ್ನು ರಾತ್ರಿ ವೇಳೆ ತಡೆಯುವ ದುಷ್ಕರ್ಮಿಗಳು ಹಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಪ್ರಕಾಶ್, ಸ್ಥಳೀಯ ರೈತ ಈ ರಸ್ತೆ ಪ್ರಖ್ಯಾತ ಪ್ರವಾಸಿತಾಣ ಮುತ್ಯಾಲಮಡುವಿಗೂ ಸಂಪರ್ಕ ಒದಗಿಸುತ್ತದೆ. ರಸ್ತೆಯ ದುಸ್ಥಿತಿಯಿಂದಾಗಿ ಅಲ್ಲಿಗೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಸ್ಥಳೀಯರು ಈ ರಸ್ತೆಯಲ್ಲಿ ಓಡಾಡಲು ಹೆದರುವ ಸ್ಥಿತಿ ಇದೆ. ಲೋಕೇಶ್, ಸ್ಥಳೀಯ ನಿವಾಸಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರಲು ಅರಣ್ಯ ಇಲಾಖೆ ಮತ್ತು ಬೆಸ್ಕಾಂ ಕಾರಣ. ಅಪಘಾತವಾದರೆ, ವಾಹನ ಸವಾರರು ಬಿದ್ದು ಗಾಯಗೊಂಡರೆ ನಾನೇನೂ ಮಾಡಲು ಸಾಧ್ಯವಿಲ್ಲ. ಪ್ರಕಾಶ್, ಗುತ್ತಿಗೆದಾರ