

ಶಿವು ಶಶಿಮಠ ಗಜೇಂದ್ರಗಡ
ನೂತನ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದಿರುವ ಗಜೇಂದ್ರಗಡ ತಾಲೂಕಿನ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಶಾಸಕ ಕಳಕಪ್ಪ ಬಂಡಿ ಜಾರಿಗೊಳಿಸಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ (ಎನ್ಎಚ್ 367ರ) ಅಭಿವೃದ್ಧಿಗೆ ಹಾಗೂ ಪಟ್ಟಣದಲ್ಲಿ ಈ ಹೆದ್ದಾರಿಯು ಸಾಗುವ ಮಾರ್ಗವನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಬಂಡಿ ಅವರ ನೇತೃತ್ವದಲ್ಲಿ ಜ. 26ರಂದು ಭೂಮಿಪೂಜೆ ನೆರವೇರಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯು ಸಂಚಾರ ಸುಗಮಗೊಳಿಸುವುದಲ್ಲದೆ, ಪಟ್ಟಣದ ಸೌಂದರ್ಯವನ್ನೂ ಅಧಿಕಗೊಳಿಸುವ ಮೂಲಕ ಗಜೇಂದ್ರಗಡಕ್ಕೆ ಗರಿ ಮೂಡಿಸಲಿದೆ.
ರಸ್ತೆ ಕಾಮಗಾರಿ ಮಾರ್ಗ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಒಟ್ಟು 1197 ಕಿ.ಮೀ. ಉದ್ದದ ಕಾಮಗಾರಿಗೆ ವಿಡಿಯೋ ಸಂವಾದದ ಮೂಲಕ ಜನವರಿ 16ರಂದು ಚಾಲನೆ ನೀಡಿದ್ದರು. ಉದ್ದೇಶಿತ ಬಾನಾಪೂರ- ಗದ್ದನಕೇರಿ ಹೆದ್ದಾರಿ ಕಾಮಗಾರಿಯು ಗಜೇಂದ್ರಗಡ ಮಾರ್ಗವಾಗಿ ಹಾದು ಹೋಗಲಿದೆ.
ಈ ಹೆದ್ದಾರಿಯು ತಾಲೂಕಿನಲ್ಲಿ ಉಣಚಗೇರಿ- ಗಜೇಂದ್ರಗಡ- ರಾಜೂರ (39.95 ಕಿ.ಮೀ. ದಿಂದ 52 ಕಿ.ಮೀ. ವರೆಗೆ ಖಾತ್ರಾಳ ಕ್ರಾಸ್ವರೆಗೆ ) ಒಟ್ಟು 12.05 ಕಿ.ಮೀ. ಉದ್ದ ಸಾಗಲಿದೆ. ಪಟ್ಟಣದ ಹೊರವಲಯದಲ್ಲಿ ಒಟ್ಟು 9.19 ಕಿ.ಮೀ. ದ್ವಿಪಥ ರಸ್ತೆ ಡಾಂಬರೀಕರಣ ಕಾಮಗಾರಿ ವೇಳೆಯಲ್ಲಿ 11 ಸೇತುವೆಗಳ ನಿರ್ವಣ, 6 ಪೈಪ್ ಸಿ.ಡಿ. (ಅಡ್ಡ ಚರಂಡಿ) ನಿರ್ಮಾಣ ಇದರಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಅವರು ಪಟ್ಟಣದಲ್ಲಿ ಹೆದ್ದಾರಿ ಸಾಗುವ ಮಾರ್ಗದಲ್ಲಿ ಚತುಷ್ಪಥ ನಿರ್ವಿುಸುವ ಮಹತ್ವಾಕಾಂಕ್ಷಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಎರಡೂ ಕಾಮಗಾರಿಗಳಿಗೆ ಶಾಸಕ ಕಳಕಪ್ಪ ಬಂಡಿ ಅವರು ಪಟ್ಟಣದ ರೋಣ ರಸ್ತೆಯ ಎಪಿಎಂಸಿ ಬಳಿಯ ಬಯಲು ಜಾಗದ ಮುಂಭಾಗದ ರಸ್ತೆಯಲ್ಲಿ ಚಾಲನೆ ನೀಡಲಿದ್ದಾರೆ. ಈ ಎರಡೂ ಕಾಮಗಾರಿಗಳ ಒಟ್ಟು ವೆಚ್ಚ 70.44 ಕೋಟಿ ರೂ. ಆಗಿದೆ.
ಏನಿದು ಚತುಷ್ಪಥ: ರಾಷ್ಟ್ರೀಯ ಹೆದ್ದಾರಿ 367 ಮಾರ್ಗವು ಪಟ್ಟಣದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯವರೆಗೆ (2.76 ಕಿ.ಮೀ. ವರೆಗೆ) ಸಾಗುತ್ತದೆ. ಈ ಸಂದರ್ಭವನ್ನೇ ಬಳಸಿಕೊಂಡಿರುವ ಶಾಸಕ ಬಂಡಿ ಅವರು, ದೂರದೃಷ್ಟಿಯ ಯೋಜನೆ ರೂಪಿಸಿದ್ದಾರೆ. ಎರಡು ಪಥವಾಗಿ ನಿರ್ವಣವಾಗುವ ರಾಷ್ಟ್ರೀಯ ಹೆದ್ದಾರಿಯನ್ನೇ ಚತುಷ್ಪಥವನ್ನಾಗಿಸಿ ಪಟ್ಟಣದಲ್ಲಿ ಸಂಚಾರ ಸುಗಮವಾಗುವಂತೆ ಕಾರ್ಯತಂತ್ರ ಹೆಣೆದಿದ್ದಾರೆ. ಇದರ ಅನುಸಾರವಾಗಿ ಪಟ್ಟಣದ ಮಧ್ಯಭಾಗದಲ್ಲೇ ಚತುಷ್ಪಥ ನಿರ್ವಣವಾಗಲಿದೆ. ಈ ನಾಲ್ಕು ಪಥಗಳ ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿ ಡಿವೈಡರ್, ವಿದ್ಯುತ್ ದೀಪ, ಚರಂಡಿ ಗ್ರೀಲ್ ಮುಂತಾದ ಸೌಲಭ್ಯಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.
ಹಲವು ಪ್ರಯೋಜನ: ಕೊಪ್ಪಳ ಜಿಲ್ಲೆಯ ಬಾನಾಪೂರದಿಂದ ಆರಂಭವಾಗುವ ಹೆದ್ದಾರಿಯು (ಎನ್ಎಚ್ 367) ಕುಕನೂರ, ಯಲಬುರ್ಗಾ, ಗಜೇಂದ್ರಗಡ, ಬಾದಾಮಿ, ಗುಳೇದಗುಡ್ಡ ಮೂಲಕ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ವರೆಗೆ ನಿರ್ವಣವಾಗಲಿದೆ. ಈ ರಸ್ತೆಯ ನಿರ್ವಣದಿಂದಾಗಿ ಗಜೇಂದ್ರಗಡ ತಾಲೂಕಿನ ದಕ್ಷಿಣ ಕಾಶಿ ಕಾಲಕಾಲೇಶ್ವರ, ಸೂಡಿ ಗ್ರಾಮದಲ್ಲಿನ ಜೋಡು ಕಳಸ ದೇವಸ್ಥಾನ, ಇಟಗಿಯ ಭೀಮಾಂಬಿಕೆ ದೇವಸ್ಥಾನಕ್ಕೆ ಪ್ರಯಾಣ ಕೈಗೊಳ್ಳುವುದು ಸುಲಭವಾಗಲಿದೆ. ತಾಲೂಕಿನಲ್ಲಿ ವ್ಯಾಪಾರ, ವಹಿವಾಟು ಹೆಚ್ಚಳವಾಗಲು ನೆರವಾಗಲಿದೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಜೊತೆಗೆ ರೈತರ ಹಾಗೂ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಶಾಸಕ ಕಳಕಪ್ಪ ಬಂಡಿ ಅವರು ಸದಾ ಶ್ರಮಿಸುತ್ತಿದ್ದಾರೆ. ಈ ದೆಸೆಯಲ್ಲಿ ಪಟ್ಟಣದಲ್ಲಿ ದ್ವಿಪಥ ಹಾಗೂ ಚತುಷ್ಪಥ ಹೆದ್ದಾರಿ ನೀಡಲಿರುವುದು ಖುಷಿಯ ಸಂಗತಿಯಾಗಿದೆ.| ಅಶೋಕ ವನ್ನಾಲ ಬಿಜೆಪಿ ನಗರ ಘಟಕದ ಅಧ್ಯಕ್ಷ