

ಪುತ್ತೂರು: ಲೊಕೋಪಯೋಗಿ ಇಲಾಖೆ ರಸ್ತೆ, ಹಾರಾಡಿ ರೈಲ್ವೆ ಸೇತುವೆ ಅಭಿವೃದ್ಧಿ ಹಾಗೂ ಪುತ್ತೂರಿನ ರಿಂಗ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಅಶೋಕ್‌ಕುಮಾರ್ ರೈ ಮನವಿ ಸಲ್ಲಿಸಿದರು.
ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು, ಕ್ಷೇತ್ರದ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ಅನೇಕ ರಸ್ತೆಗಳು ನಾದುರಸ್ತಿಯಲ್ಲಿದ್ದು, ಇದರ ಅಭಿವೃದ್ಧಿಗೆ ೩೨ ಕೋಟಿ ರೂ. ಅನುದಾನದ ಅಗತ್ಯವಿದೆ. ಬಹಳ ವರ್ಷಗಳ ಹಿಂದೆ ಈ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದ್ದು, ಆ ಬಳಿಕ ಈ ರಸ್ತೆ ಡಾಂಬರನ್ನೇ ಕಂಡಿಲ್ಲ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ಈ ರಸ್ತೆಗಳನ್ನು ಮಳೆಗಾಲ ಮುಗಿದ ಬಳಿಕ ಅಭಿವೃದ್ಧಿ ಮಾಡಬೇಕಿದ್ದು, ಅದಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಪುತ್ತೂರು- ಉಪ್ಪಿನಂಗಡಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದ್ದು, ಇದಕ್ಕಾಗಿ ಹಾರಾಡಿಯಲ್ಲಿರುವ ರೈಲ್ವೆ ಸೇತುವೆಯನ್ನು ಅಗಲೀಕರಣ ಮಾಡಬೇಕು. ಈಗಾಗಲೇ ಕಾರ್ಯಯೋಜನೆ ಸಿದ್ಧಪಡಿಸಲಾಗಿದ್ದು, ೮ ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಪಾವತಿ ಮಾಡಬೇಕಿದೆ. ಈ ಸೇತುವೆಯ ಕಾಮಗಾರಿಗೆ ಅನುದಾನವನ್ನು ಒದಗಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.