

ಬೆಳಗಾವಿ: ಬಸಿದ್ದರಾಮಯ್ಯ ನೇತೃತ್ವದ 2013ರ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಬೆಳಗಾವಿ ನಗರದಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಈಗ ಮತ್ತೇ ನಮ್ಮ ಸರ್ಕಾರದಲ್ಲಿ ಆ ಯೋಜನೆಗಳನ್ನು ಉದ್ಘಾಟನೆ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಜನಪರ ಯೋಜನೆಯನ್ನು ಮುಂದುವರೆಸುತ್ತೇವೆ. ತಮ್ಮ ಸ್ವಾರ್ಥಕ್ಕಾಗಿ ಯೋಜನೆ ಮಾಡಿದ್ದರೆ ಮುಲ್ಲಾಜಿಲ್ಲದೆ ಬಂದ್ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಾಂಗ್ರೆಸ್ ಗ್ಯಾರಂಟಿಯಿಂದ ದೊಡ್ಡ ಮೊತ್ತದ ಹಣವನ್ನು ಜನರ ಕಲ್ಯಾಣಕ್ಕಾಗಿ ಸರ್ಕಾರ ನೀಡುತ್ತಿದೆ. ಇದು ಬಿಜೆಪಿಗೆ ದೊಡ್ಡ ಶಾಕ್ ಆಗಿದೆ. ನಮ್ಮ ಗ್ಯಾರಂಟಿಯಿಂದ ಬೇರೆ ಕಡೆ ಕರ್ನಾಟಕ ಮಾದರಿ ಬರುತ್ತದೆ. ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯಿಂದ ವಿಚಲಿತರಾಗಿದ್ದಾರೆ. ಈ ವಿಷಯವನ್ನು ಮರೆ ಮಾಚಲು ಬೇರೆ ಅಸ್ತ್ರ ಹೂಡುತ್ತಾರೆ. ಅದೇನು ಹೊಸತ್ತಲ್ಲ ಎಂದು ಟಾಂಗ್ ನೀಡಿದರು.
ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟೇಶ ಅವರ ಹೇಳಿಕೆಯನ್ನು ಬಿಜೆಪಿ ದೊಡ್ಡ ಅಸ್ತ್ರವಾಗಿಸಿಕೊಂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಇನ್ನು ಐದು ವರ್ಷ ಏನೂ ಕೆಲಸ ಇಲ್ಲ. ಬಿಜೆಪಿಯವರು ಬೋರ್ಡ್ ಬರೆದು ಇಡಬೇಕು ಇನ್ನು ಹೋರಾಟ. ಹೋರಾಟ, ಗೆಲ್ಲುವವರೆಗೂ ಹೋರಾಟ ಅಂತ. ಅವರು ಇದೇ ಕೆಲಸ ಮಾಡಿದ್ದಾರೆ. ಅಭಿವೃದ್ಧಿಯ ವಿಷಯ ಗೊತ್ತೆ ಇಲ್ಲ. ಕೇವಲ ಕೋಮು, ದ್ವೇಷ ಹರಡಿಸುವುದು, ಗಲಾಟೆ, ಒಬ್ಬರನ್ನೊಬ್ಬರು ಎತ್ತಿ ಕಟ್ಟುತ್ತಾರೆ.ಇಷ್ಟೆ. ಯಾರೇ ಹೇಳಿಕೆ ನೀಡಿದರೂ ಸದನದಲ್ಲಿ ಚರ್ಚೆಗೆ ಅವಕಾಶ ಇದೆ. ಸಚಿವ ವೆಂಕಟೇಶ ಅವರ ಹೇಳಿಕೆಗೆ ಚರ್ಚೆಗೆ ಅವಕಾಶ ಇದೆ. ಸಾಧಕ- ಬಾಧಕ ನೋಡಿ ನಿರ್ಣಯವಾಗುತ್ತದೆ. ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಅವರ ಸರ್ಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಅವರಿಗೆ ಯಾರೇ ಏನಂದರೂ ಗುರಿಯಾಗಿಟ್ಟುಕೊಂಡು ವಿರೋಧ ಮಾಡುವುದು ಸರಿಯಲ್ಲ. ಯಾವುದೇ ವಿಚಾರ ಇದ್ದರೂ ಸದನದಲ್ಲಿ ಚರ್ಚೆ ಮಾಡಬೇಕು ಎಂದರು.
ಒಡಿಶಾದ ಸಂಭವಿಸಿದ ರೈಲು ಅಪಘಾತ ದೇಶದಲ್ಲಿಯೇ ದೊಡ್ಡ ದುರಂತ. ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇಂದ್ರ ಸರ್ಕಾರ ಇನ್ನಷ್ಟು ಹೆಚ್ಚಿನ ಅನುದಾನ ಘೋಷಣೆ ಮಾಡಿದರೆ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದರು.