

ಪಾವಗಡ : ಅಕ್ರಮವಾಗಿ ಆಂಧ್ರದಿಂದ ಗ್ರಾನೈಟ್ ಬಂಡೆ ಸಾಗಿಸುತ್ತಿರುವುದನ್ನು ಪ್ರಶ್ನಿಸಿದ ದೊಡ್ಡಹಳ್ಳಿ ಗ್ರಾಮಸ್ಥರ ಮೇಲೆಯೇ
ಲಾರಿ ಮಾಲೀಕ ಮಂಜುನಾಥ ಗುರುವಾರ ತಿರುಗಿ ಬಿದ್ದು, ಜಗಳವಾಡಿದ್ದಾರೆ.
ಆಂಧ್ರದ ಕಂಬದೂರಿನಿಂದ ಪಾವಗಡ ತಾಲೂಕು ಮಾರ್ಗದಿಂದ ರಸ್ತೆ ಭಾರಮಿತಿ ಉಲ್ಲಂಘಿಸಿ ಪ್ರತಿದಿನ ಬೆಂಗಳೂರಿನ ಜಿಗಣಿಗೆ ಕಲ್ಲು ಬಂಡೆಗಳನ್ನು ಲಾರಿಗಳ ಮೂಲಕ ಸಾಗಣೆ ಮಾಡುತ್ತಿದ್ದು, ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕೆಶಿಪ್ ರಸ್ತೆ ಹಾಳಾಗುತ್ತಿದೆ. ಈ ಬಗ್ಗೆ ಲಾರಿ ಮಾಲೀಕನನ್ನು ಕೇಳಿದರೆ ನಮ್ಮ ಮೇಲೆ ತಿರುಗಿ ಬೀಳುತ್ತಾನೆ ಎಂದು ದೊಡ್ಡಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಪ್ರತಿನಿತ್ಯ ಬಂಡೆಗಳನ್ನ ಸಾಗಿಸುವ ಲಾರಿಗಳಿಗೆ ಪರ್ಮಿಟ್ ಹಾಗೂ ಸರ್ಕಾರಕ್ಕೆ ರಾಯಲ್ಟಿ ಪಾವತಿಸಬೇಕಿದೆ. ಆದರೆ, ಎರಡು ಲಾರಿಗಳಿಗೆ ಪರವಾನಗಿ ಪಡೆದು ಕಳ್ಳದಾರಿಯಲ್ಲಿ ಲಾರಿಗಳನ್ನ ಓಡಿಸಲಾಗುತ್ತದೆ. ಕಲ್ಯಾಣದುರ್ಗ ಮಾರ್ಗದ ಕೇವಲ 10 ಕಿ.ಮೀ ಅಂತರದಲ್ಲಿರುವ ಕಂಬದೂರಿನಿಂದ ಬೆಂಗಳೂರಿನ ಜಿಗಣಿಗೆ 10 ಲಾರಿಗಳು ಸಂಚರಿಸುತ್ತಿದ್ದು, ಪ್ರತಿ ಲಾರಿಯಲ್ಲೂ 30 ಟನ್‌ಗೂ ಹೆಚ್ಚು ಭಾರವಿರುವ ಕಲ್ಲು ಬಂಡೆಗಳನ್ನು ತೆರೆದ ವಾಹನಗಳಲ್ಲಿ ತುಂಬಿಕೊಂಡು ರಾತ್ರಿ ಹಾಗೂ ಹಗಲು ಸಮಯದಲ್ಲಿ ಪಾವಗಡದ ಮಾರ್ಗದಲ್ಲಿ ಸಂಚರಿಸಲಾಗುತ್ತಿದೆ. ಬಂಡೆ ಸಾಗಿಸುತ್ತಿರುವವರನ್ನು ಸಾರ್ವಜನಿಕರು ಕೇಳಿದರೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೊಡ್ಡಹಳ್ಳಿ ಹಾಗೂ ಕೆ.ರಾಂಪುರ ಗ್ರಾಮಸ್ಥರಾದ ಗೋಪಿನಾಥ್, ರಾಜು, ಪರಮೇಶ್, ವೀರೇಶ್,ರಾಮಾಂಜಿನಪ್ಪ, ರಮೇಶ್ ಆರೋಪಿಸಿದ್ದಾರೆ.
ಹಾಳಾಗುತ್ತಿವೆ ರಸ್ತೆಗಳು : ಬೃಹತ್ ಬಂಡೆಗಳ ಸಾಗಾಣಿಯಿಂದ ಕರ್ನಾಟಕ ಗಡಿ ನಾಗಲಾಪುರದಿಂದ ಪಾವಗಡದವರೆಗೂ ಕೆಶಿಪ್ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿದೆ, ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದೆ, ಗುಂಡಿಗಳಿಗೆ ತೇಪೆ ಹಾಕುವುದಕ್ಕಿಂತ ಮೊದಲು ರಸ್ತೆಯನ್ನು ರಕ್ಷಣೆ ಮಾಡುವ ಕಡೆಗೆ ಲೋಕೋಪಯೋಗಿ ಇಲಾಖೆ ಗಮನಹರಿಸಬೇಕಿದೆ.
ಆಂಧ್ರದ ಕಂಬದೂರಿನಿಂದ ಪಾವಗಡ ಮಾರ್ಗವಾಗಿ ಜಿಗಣಿಗೆ ಹೆಚ್ಚುಭಾರದ ಲಾರಿಗಳಲ್ಲಿ ಕಲ್ಲುಬಂಡೆಗಳನ್ನು ಸಾಗಿಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲು ಮಧುಗಿರಿ ಎಆರ್‌ಟಿಒಗೆ ಪತ್ರ ಬರೆಯಲಾಗಿದೆ. ಅನಿಲ್‌ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಕಲ್ಲು ಬಂಡೆಗಳ ಸಾಗಣೆಯಿಂದ ರಸ್ತೆ ಬಿರುಕು ಬಿಟ್ಟು ಗುಂಡಿಗಳು ಬಿದ್ದಿವೆ, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಲಾರಿಗಳನ್ನ ತಡೆದು ಉಗ್ರ ಹೋರಾಟ ನಡೆಸಲಾಗುವುದು. ಲಕ್ಷ್ಮೀ ವೀರೇಶ್, ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷೆ