ನೆಲ್ಲಿಕಟ್ಟೆಯ ೮೦ ಸೆಂಟ್ಸ್ ಜಾಗ ದೇವಳಕ್ಕೆ ಮರುಸ್ವಾಧೀನ TEMPLE
ವಿನಾಯಕ್ ಭಟ್ ಅವರು ತಾವು ವಾಸವಿದ್ದ ಮನೆಯ ಜಾಗವನ್ನು ಶಾಸಕ ಅಶೋಕ್ ಕುಮಾರ್ ರೈ ಮೂಲಕ ದೇವಳಕ್ಕೆ ಹಸ್ತಾಂತರಿಸಿದರು. ಈಶ್ವರ್ ಭಟ್ ಪಂಜಿಗುಡ್ಡೆ, ವಿನಯ ಸುವರ್ಣ, ಕೆ.ವಿ.ಶ್ರೀನಿವಾಸ್ ಇತರರು ಇದ್ದರು.
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗ ಮರುಸ್ವಾಧೀನ ಪ್ರಕ್ರಿಯೆಯ ಭಾಗವಾಗಿ ನೆಲ್ಲಿಕಟ್ಟೆಯಲ್ಲಿ ೮೦ ಸೆಂಟ್ಸ್ ಜಾಗವನ್ನು ಸೋಮವಾರ ಮಾತುಕತೆಯ ಮೂಲಕ ಮರುಸ್ವಾಧೀನ ಮಾಡಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ವಿನಾಯ ಭಟ್ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿತ್ತು. ಮನೆಯಲ್ಲಿ ವಾಸವಿದ್ದ ವಿನಾಯಕ್ ಭಟ್ ಅವರು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ಮೂಲಕ ದೇವಳಕ್ಕೆ ಮನೆಯನ್ನು ಹಸ್ತಾಂತರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ಪದ್ಮನಾಭ, ಪ್ರಕಾಶ್ ಗೌಡ, ನಡುಬೈಲುಗುತ್ತು ಗೋಪಾಲ ಪೂಜಾರಿ, ಲೋಕೇಶ್ ಪಡ್ಡಾಯೂರು, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
"
ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಕೆಲಸ ಹಂತಹಂತವಾಗಿ ನಡೆಯುತ್ತಿದೆ. ಸುಮಾರು ೪೦ ವರ್ಷಗಳಿಂದ ಮನೆ ಮಾಡಿಕೊಂದು ವಾಸವಿದ್ದರು. ತಿಂಗಳ ಹಿಂದೆ ಈ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡುವಂತೆ ಕೇಳಿದಾಗ ಸಂತೋಷದಿಂದ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ. ಎರಡು ತಿಂಗಳ ಸಮಯಾವಕಾಶದ ನಂತರ ಅವರೇ ಮಹಾಲಿಂಗೇಶ್ವರ ದೇವರಿಗೆ ಅಡಿಸ್ಥಳವನ್ನು ಬಿಟ್ಟುಕೊಟ್ಟಿದ್ದಾರೆ.
— ಅಶೋಕ್ ಕುಮಾರ್ ರೈ, ಶಾಸಕ
"
ಸುಮಾರು ೫೦ ವರ್ಷದಿಂದ ಜಾಗದಲ್ಲಿ ವಾಸ್ತವ್ಯವಿದ್ದು, ಇಂದು ದೇವಸ್ಥಾನದ ಜಾಗವನ್ನು ಸಂತೋಷದಿಂದ ಬಿಟ್ಟುಕೊಟ್ಟಿದ್ದೇವೆ. ಜಾಗದಲ್ಲಿ ತುಂಬಾ ಅಭಿವೃದ್ಧಿ ಕಂಡಿದ್ದು, ತ್ವರಿತವಾಗಿ ಬೇರೆ ಮನೆ ಲಭಿಸಿದೆ.