

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಿದ್ದು, ಮೊದಲ ಹೆಜ್ಜೆಯಾಗಿ ದೇವಳ ಜಮೀನಲ್ಲಿದ್ದ ಮೂರು ಮನೆಗಳ ತೆರವು ಕಾರ್ಯಕ್ಕೆ ಶುಕ್ರವಾರ ಅಶೋಕ್ ಕುಮಾರ್ ರೈ ಚಾಲನೆ ನೀಡಿದರು.
ದೇವಸ್ಥಾನದ ಸುತ್ತ ಇರುವ ಮನೆಗಳನ್ನು ತೆರವು ಮಾಡಿ ಸಮತಟ್ಟು ಮಾಡಲಾಗುತ್ತಿದೆ. ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ ೨ಕೋಟಿ ರೂ. ಅನುದಾನ ಬಂದಿದ್ದು, ೩೦ರಿಂದ ೪೦ ಅಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಅನುದಾನ ಲಭಿಸಿದೆ. ದೇವಸ್ಥಾನ ಆವರಣದಲ್ಲಿ ಸುಮಾರು ೬೦ ಕೊಠಡಿಗಳನ್ನು ಹೊಂದಿದ ವಸತಿ ಗೃಹಗಳ ನಿರ್ಮಾಣ ನಡೆಯಬೇಕಾಗಿದೆ.
ದೇಗುಲ ಪರಿಸರದಲ್ಲಿರುವ ಸಭಾಂಗಣಕ್ಕೆ ಪ್ರಶ್ನಾ ಚಿಂತನೆಗಳ ಮೂಲಕ ಪರಿಹಾರ ಹುಡುಕುವ ಕಾರ್ಯ ನಡೆಯಲಿದೆ. ದೇವಸ್ಥಾನಕ್ಕೆ ಆವರಣ ಗೋಡೆ, ರಸ್ತೆಗಳಿಗೆ ಗೇಟುಗಳ ಅಳವಡಿಕೆ ಮುಂದಿನ ದಿನ ನಡೆಯಲಿದೆ. ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯೂ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.
ತ್ಯಾಜ್ಯ ನಿರ್ವಹಣೆಗೆ ಯೋಜನೆ!
ನಗರಸಭೆಗೆ ರಾಜ್ಯ ಸರ್ಕಾರದಿಂದ ೧೪.೫ಕೋಟಿ ರೂ ಬಂದಿದ್ದು, ದೇವಸ್ಥಾನ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಸರಿಪಡಿಸಿ ತ್ಯಾಜ್ಯ ಸಂಸ್ಕರಿಸುವ ಹಾಗೂ ತೋಡಿನ ಕೊಳಚೆ ನೀರನ್ನು ಶುದ್ಧೀಕರಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಬೆದ್ರಾಳದಲ್ಲಿ ಇದಕ್ಕೆ ಜಾಗ ಗುರುತಿಸಲಾಗಿದ್ದು, ಸಮಸ್ಯೆ ಸರಿಪಡಿಸಿ ಕೆಲಸ ನಿರ್ವಹಿಸುವ ಭರವಸೆಯನ್ನು ಶಾಸಕ ಅಶೋಕ್ ರೈ ನೀಡಿದ್ದಾರೆ.
ವಿಶೇಷ ಪ್ರಾರ್ಥನೆ!
ಮನೆ ತೆರವಿಗೂ ಮುನ್ನ ಮನೆಯಲ್ಲಿ ವಾಸವಿದ್ದ ನಾರಾಯಣ ಶಗ್ರಿತ್ತಾಯ, ವಿಶ್ವನಾಥ್, ನೇರಂಕಿ ಉಮಾ ಸುರೇಶ್ ರಾವ್ ಸಮ್ಮುಖ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಲಾಯಿತು. ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ನಳಿನಿ ಪಿ. ಶೆಟ್ಟಿ, ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿವಿ, ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶೀಘ್ರದಲ್ಲೇ ಉಳಿದ ಮನೆಗಳೂ ತೆರವು
ಮೂವತ್ತು ವರ್ಷಗಳ ಹಿಂದೆ ಬಾಡಿಗೆಗೆ ನೀಡಿದ ೭ ಮನೆಗಳಲ್ಲಿ ೧ದೇವಸ್ಥಾನದ ಬಳಕೆಯಲ್ಲಿದ್ದರೆ ೩ ಮನೆಗಳನ್ನು ಸ್ವಇಚ್ಛೆಯಿಂದ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದು, ೩ ಮನೆ ಇನ್ನೂ ಬಾಕಿ ಉಳಿದಿದೆ. ಎಲ್ಲರಿಂದ ಒಪ್ಪಿಗೆ ಪಡೆದು ಅವುಗಳ ತೆರವು ಕಾರ್ಯ ನಡೆಯಲಿದೆ.
ವ್ಯವಸ್ಥಾಪನಾ ಸಮಿತಿ ಅಽಕಾರಕ್ಕೆ ಬಂದು ೪೦ದಿನ ಆಗಿದೆ. ಇರುವ ಮೂರು ವರ್ಷದಲ್ಲಿ ಅಭಿವೃದ್ಧಿಗೆ ವೇಗ ನೀಡಲಿದ್ದೇವೆ. ಒಂದು ತಿಂಗಳಲ್ಲಿ ದೇವಸ್ಥಾನದ ಮಾಸ್ಟರ್‌ಪ್ಲಾನ್‌ಗೆ ಅನುಮೋದನೆ ಪಡೆಯಲಾಗುವುದು. ಸರ್ಕಾರದಿಂದ ಅನುದಾನ ಸಿಗದೇ ಹೋದರೂ, ರೂ. ೨೫ರಿಂದ ರೂ.೫೦ಕೋಟಿ ಸಂಗ್ರಹಕ್ಕೆ ಏನೂ ಸಮಸ್ಯೆಯಿಲ್ಲ.
| ಅಶೋಕ್ ಕುಮಾರ್ ರೈ
ಶಾಸಕರು
ಪ್ರತಿಯೊಬ್ಬರ ಮನವೊಲಿಸಿ ದೇವಸ್ಥಾನದ ಸುತ್ತ ಇರುವ ಮನೆಗಳನ್ನು ಸ್ವಾಽನಕ್ಕೆ ಪಡೆದು, ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡಲಿದ್ದೇವೆ.
| ಈಶ್ವರ ಭಟ್ ಪಂಜಿಗುಡ್ಡೆ
ಅಧ್ಯಕ್ಷರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ