ಸರ್ವೆ ಕಲ್ಪಣೆ ಪ್ರಾಥಮಿಕ ಶಾಲೆಯಲ್ಲಿ ವರ್ಣಮಯ ಕಲಿಕೆ

sarve kalpane school
Published on

- ಭರತ್‌ರಾಜ್ ಸೊರಕೆ

ಸರ್ಕಾರಿ ಶಾಲೆಗಳೆಂದರೆ ಬಣ್ಣ ಕಾಣದ ಗೋಡೆ, ಆಕಾಶ ಕಾಣುವ ಛಾವಣಿ, ಸ್ವಚ್ಛವಿಲ್ಲದ ವರಾಂಡ ಎಂಬ ಕಲ್ಪನೆಗಳೇ ಹೆಚ್ಚು. ಆದರೆ ಪುತ್ತೂರು ಸರ್ವೆ ಗ್ರಾಮದ ಕಲ್ಪಣೆ ಸರ್ಕಾರಿ ಪ್ರಾಥಮಿಕ ಶಾಲೆ ಹೀಗಿಲ್ಲ.

ಹಸಿರು ಪರಿಸರದ ನಡುವೆ ವರ್ಲಿ ಚಿತ್ರದ ಗೋಡೆ, ತರಗತಿಯೊಳಗೆ ಮಕ್ಕಳು ಬೆರಗು ಕಣ್ಣುಗಳಿಂದ ನೋಡುವ ಬಣ್ಣಗಳು, ಮುಟ್ಟಿ ಕಲಿ, ಪ್ರಶ್ನಿಸಿ ತಿಳಿ ಎನ್ನುವ ಕಲ್ಪನೆಯಲ್ಲಿ ಮೂಡಿರುವ ಮಾದರಿಗಳು, ಸ್ವಚ್ಛ ವಠಾರ. ಅಧ್ಯಾಪಕ ವರ್ಗ ಮನಸ್ಸು ಮಾಡಿದರೆ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲವೆನ್ನುವಂತೆ ಶಾಲೆಯನ್ನು ಸಜ್ಜುಗೊಳಿಸಬಹುದು ಎನ್ನುವುದಕ್ಕೆ ಸರ್ವೆ ಕಲ್ಪಣೆಯ ಪ್ರಾಥಮಿಕ ಶಾಲೆ ಮಾದರಿ.

ಮಕ್ಕಳು ಆಟವಾಡುತ್ತಾ ಕಲಿಯುವ ದಿನದರ್ಶಿಕೆ, ಅಕ್ಷರ ರೈಲು, ಉಚ್ಚಾರಣೆ ಸುಧಾರಣೆಗೆ ನಾಲಿಗೆ ನುಲಿ ಗಿಣಿ, ಇಂಗ್ಲಿಷ್ ಅಕ್ಷರ ಅರಿವು ಮಾಡುವ ಗಿಟಾರ್, ವಿರುದ್ಧ ಪದ ತಿಳಿಸುವ ಗುಬ್ಬಿ, ಸಮಾನಾರ್ಥ ಪದಗಳ ಮನವರಿಕೆ ಮಾಡುವ ಪೈನಾಪಲ್, ರೈಮ್ಸ್ ಹೇಳುವ ಬಾತುಕೋಳಿ, ಬಣ್ಣಗಳ ಪರಿಚಯಿಸುವ ಕಾಮನ ಬಿಲ್ಲು, ಸಮಯದ ಅರಿವು ಮೂಡಿಸುವ ಹಳ್ಳಿ ಗಡಿಯಾರ, ವರ್ಣ ಮಾಲೆ ಪರಿಚಯಿಸುವ ಅಕ್ಷರ ತೋರಣ... ಹೀಗೆ ಬರೆಯುವ, ಓದುವ, ಚಟುವಟಿಕೆ ಮಾಡಿ ತಿಳಿಯುವ ಹಲವಾರು ಶೈಕ್ಷಣಿಕ ಮಾದರಿಗಳು ಶಾಲೆಯಲ್ಲಿವೆ. ಪ್ರಸ್ತುತ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 111 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 1ನೇ ತರಗತಿಗೆ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.

ಕ್ರಿಯಾಶೀಲ ಶಿಕ್ಷಕ ಸತೀಶ್: ಈ ವರ್ಣಮಯ ಕಲಿಕಾ ಮಾದರಿಗಳ ಹಿಂದೆ ಸದ್ದಿಲ್ಲದೆ ಕೆಲಸ ಮಾಡಿರುವುದು ಶಿಕ್ಷಕ ಸತೀಶ್. ಕೋವಿಡ್ ಸಂದರ್ಭದ ಬಿಡುವಿನ ಸಮಯವನ್ನು ಹಿರಿಯ ಚಿತ್ರಕಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮಾದರಿ ರಚಿಸಲು ಸದುಪಯೋಗಿಸಿದ್ದಾರೆ. ವಿದ್ಯಾರ್ಥಿಗಳನ್ನು ‘ಮಗಾ..’ ಎಂದು ಕರೆಯುವ ಸತೀಶ್ ಮೇಷ್ಟ್ರು ಅಂದ್ರೆ ಹೆಚ್ಚು ಪ್ರೀತಿ. ಇವರು ರಚಿಸಿ ಪ್ರಸ್ತುತಪಡಿಸುವ ಮಾಡೆಲ್‌ಗಳಲ್ಲಿ ಬಣ್ಣ, ಪೇಪರ್, ಅಂಟು ಹೊರತುಪಡಿಸಿ ಉಳಿದೆಲ್ಲವೂ ವೇಸ್ಟ್ ಎಂದು ಬಿಸಾಡಿದ ವಸ್ತುಗಳು ಎಂಬುದು ವಿಶೇಷ.

ಚಟುವಟಿಕೆಗೆ ಪ್ರೇರಣೆ: ಎಲ್ಲ ಶಾಲೆಗಳಲ್ಲಿ ದಿನ ಹಾಜರಾತಿ, ದಿನಾಂಕ, ವಾರಗಳನ್ನು ಬೋರ್ಡ್‌ನ ಮೂಲೆಯಲ್ಲಿ ಬರೆಯುವುದು ಕ್ರಮ. ಆದರೆ ಇಲ್ಲಿ ಶಿಕ್ಷಕ ಸತೀಶ್ ಪ್ರತ್ಯೇಕ ಕಾರ್ಡ್‌ಗಳನ್ನು ರಚಿಸಿದ್ದಾರೆ. ಪ್ರತಿದಿನ ಹಾಜರಾತಿಯನ್ನು ಮಕ್ಕಳೇ ಲೆಕ್ಕಹಾಕಿ ಆ ಸಂಖ್ಯೆಯ ಕಾರ್ಡ್ ಜೋಡಿಸುತ್ತಾರೆ. ವಾರ, ದಿನಾಂಕವನ್ನು ಎಲ್ಲರಿಗೂ ತಿಳಿಸಿ ಬದಲಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಸ್ವ ಕಲಿಕೆ ಮನೋಭಾವ ಹೆಚ್ಚುತ್ತದೆ.

ಚಟುವಟಿಕೆಗೆ ಪ್ರೇರಣೆ ನೀಡುವುದಕ್ಕೋಸ್ಕರ ಉತ್ತಮ ಕಲಿಕೆ, ಹಾಜರಾತಿ, ತರಗತಿ ಸ್ವಚ್ಛತೆ ಹೀಗೆ ವಿವಿಧ ವಿಭಾಗಗಳಲ್ಲಿ 15 ದಿನಕ್ಕೊಮ್ಮೆ ಪದಕ ವಿತರಣೆ ನಡೆಯುತ್ತದೆ. ಮಕ್ಕಳನ್ನು ಗುರುತಿಸಿ ಗೌರವಿಸುವುದರಿಂದ ಗುಣಾತ್ಮಕ ಬದಲಾವಣೆಗಳಾಗಿವೆ ಎನ್ನುತ್ತಾರೆ ಶಿಕ್ಷಕ ಸತೀಶ್.

ವರ್ಣಮಯ ಶೈಕ್ಷಣಿಕ ಮಾದರಿಗಳು ಕಲಿಕೆಯ ಆಕರ್ಷಣೆ ಹೆಚ್ಚಿಸಿದೆ. ಒಬ್ಬರಿಗೊಬ್ಬರು ಆಟವಾಡುತ್ತಾ ಕಲಿಯುವುದು ಇದರ ಮುಖ್ಯಉದ್ದೇಶ. ಈ ಚಿತ್ರ, ಮಾದರಿ ರಚಿಸಲು ನನ್ನ ಹಳೇ ವಿದ್ಯಾರ್ಥಿಗಳ ಸಹಕಾರ ಪಡೆಯುತ್ತೇನೆ. ಎಲ್ಲ ಶಿಕ್ಷಕರ ಸಹಕಾರವಿದೆ.

-ಸತೀಶ್, ಶಿಕ್ಷಕ ಸರ್ವೆ ಕಲ್ಪಣೆ ಹಿರಿಯ ಪ್ರಾಥಮಿಕ ಶಾಲೆ

ಮಕ್ಕಳ ಪ್ರತಿಭೆ ಪ್ರದರ್ಶಿಸುವ ಚಪ್ಪರ ಎಲ್ಲ ಶಾಲೆಯಲ್ಲಿ ಮಾಮೂಲಿ ಆದರೆ ನಮ್ಮ ಶಾಲೆಯಲ್ಲಿ ಶಿಕ್ಷಕ ಸತೀಶ್ ನೇತೃತ್ವದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಗೋಡೆಗಳಲ್ಲಿ ಕಲಿಕೆಗೆ ಪೂರಕ ಮಾದರಿಗಳನ್ನು ರಚಿಸಲಾಗಿದೆ. ಮಕ್ಕಳು ಅದೇ ಕ್ಲಾಸಲ್ಲಿ ಇದ್ದು ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

-ಕಮಲಾ, ಮುಖ್ಯಶಿಕ್ಷಕಿ ಸರ್ವೆ ಕಲ್ಪಣೆ ಹಿರಿಯ ಪ್ರಾಥಮಿಕ ಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net