ನಿವೃತ್ತ ಜೀವನಕ್ಕೆ ಸಾಂಘಿಕ ಚಟುವಟಿಕೆ ಪೂರಕ - ಕೆ.ಪ್ರಮೋದ್ ಕುಮಾರ್ ರೈ ಅಭಿಮತ - ಕವಿ ಸುಬ್ರಾಯ ಚೊಕ್ಕಾಡಿ ದಂಪತಿಗೆ ಪ್ರಶಸ್ತಿ ಪ್ರದಾನ

PTR_4 MAY_3
Published on

ಪುತ್ತೂರು: ನಿವೃತ್ತಿ ಜೀವನದಲ್ಲಿ ಸಮಯ ಕಳೆಯುವುದು ಕಷ್ಟವಾಗಿದ್ದು, ಈ ಸಂದರ್ಭದಲ್ಲಿ ಸಂಘವನ್ನು ಕಟ್ಟಿಕೊಂಡು ಸಮಾಜಕ್ಕಾಗಿ ಕೆಲಸ ಮಾಡುತ್ತಿರುವುದು ದೊಡ್ಡ ವಿಚಾರವಾಗಿದೆ. ಹೊಲ ಉಳುವ ರೈತನಾದರೂ, ಸ್ವಾಂತಂತ್ರ ದ ಎಲ್ಲ ಮಜಲುಗಳನ್ನು ತಂದೆಯ ಮೂಲಕ ತಿಳಿದುಕೊಂಡಿದ್ದೇನೆ. ಪುತ್ತೂರು ಆಕರ್ಷಣೀಯ ಸ್ಥಳವಾಗಿದ್ದು, ಚಟುವಟಿಕೆಯನ್ನು ನಡೆಸಲು ಪೂರಕ ಸ್ಥಳವಾಗಿದೆ ಎಂದು ಕ್ಯಾಂಪ್ಕೋ ನಿವೃತ್ತ ಆಡಳಿತ ನಿರ್ದೇಶಕ ಕೆ.ಪ್ರಮೋದ್ ಕುಮಾರ್ ರೈ ಹೇಳಿದರು.


ಪುತ್ತೂರು ಜೈನ ಭವನದಲ್ಲಿ ಶನಿವಾರ ಕರ್ನಾಟಕ ನಿವೃತ್ತ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ, ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ಸಾಹಿತ್ಯ ಕ್ಷೇತ್ರಕ್ಕೆ ಸಂಬಂಽಸಿ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಮತ್ತು ಲಕ್ಷ್ಮೀ ದಂಪತಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಎಚ್. ಜಿ. ಶ್ರೀಧರ್ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ನಿವೃತ್ತ ನೌಕರರ ಸಂಘದ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಪಿ.ಐತ್ತಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.


ಸಂಘದಲ್ಲಿ ಈಗಾಗಲೇ ೧ ಸಾವಿರ ಸದಸ್ಯರಿದ್ದು, ಈ ಪೈಕಿ ಸಂಘದ ಸದಸ್ಯರಾಗಿ ೭೫, ೮೦ ಮತ್ತು ೮೫ ವರ್ಷ ಪ್ರಾಯ ಪೂರ್ಣಗೊಂಡ ೪೮ ಮಂದಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಂಚನ ಸುಂದರ ಭಟ್, ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ, ಉಪಾಧ್ಯಕ್ಷ ರಾಮದಾಸ್ ಗೌಡ ಎಸ್, ಉಪಸ್ಥಿತರಿದ್ದರು.


ಸಂಘದ ಸದಸ್ಯ ನಾಗಪ್ಪ ಗೌಡ ಬೊಮ್ಮೆಟ್ಟಿ, ಕೋಶಾಽಕಾರಿ ಶಾಂತಿ ಟಿ ಹೆಗಡೆ, ಯಶೋದಾ, ನಿವೃತ್ತ ಶಿಕ್ಷಕಿ ಸುಶೀಲ, ಸಾಂಸ್ಕೃತಿಕ ಕಾರ್ಯದರ್ಶಿ ಲೀನಾ ಪುಡ್ತಾದೊ, ಸಂಘದ ಜೊತೆ ಕಾರ್ಯದರ್ಶಿ ಶಶಿಕಲಾ ಅವರು ಸನ್ಮಾನಿತರನ್ನು ಪರಿಚಯಿಸಿದರು. ಸಂಘದ ಉಪಾಧ್ಯಕ್ಷೆ ಪ್ರೊ. ವತ್ಸಲಾ ರಾಜ್ಞಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ
ಕೃಷಿ ಕ್ಷೇತ್ರಕ್ಕೆ ಸಂಬಂಽಸಿ ಸಾಧನ ಸಲಕರಣೆ ತಯಾರಿಸುವ ಮೂಲಕ ಪ್ರಸಿದ್ಧಿ ಪಡೆದ ಎಸ್.ಆರ್.ಕೆ.ಲ್ಯಾಡರ್‍ಸ್‌ನ ಮಾಲಕ ಕೇಶವ ಅಮೈ, ಗಣರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರತಿನಿಽಸಿದ ಸ್ವಾತಿ ಎನ್. ವಿ., ಶಮಾ ಚಂದುಕೂಡ್ಲು, ಪ್ರಣಮ್ಯ, ದಕ್ಷಿಣ ಆಫ್ರಿಕಾದ ಟುನಿಷಿಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಽಸಿ ಚಿನ್ನದ ಪದಕ ಪಡೆದ ಆಪ್ತ ಚಂದ್ರಮತಿ ಮುಳಿಯ, ಎನ್‌ಸಿಸಿ ಮೂಲಕ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಽ ತೇಜಸ್ವಿನಿ ವಿ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕವಿತೆಗೆ ಮಾತಿಗೆ ಮೀರಿದ ಅನುಭವವನ್ನು ಹೇಳುವ ವಿಚಾರವಿದೆ. ಪುತ್ತೂರಿನ ಕರ್ನಾಟಕ ನಿವೃತ್ತ ನೌಕರರ ಸಂಘ ವಿಸ್ತಾರವಾದ ರೆಂಬೆಕೊಂಬೆಗಳನ್ನು ಬೆಳೆಸಿಕೊಂಡಿದೆ. ನಿವೃತ್ತರ ಸಂಘ ಇಷ್ಟು ದೊಡ್ಡದಾಗಿ ಬೆಳೆದು ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ವಿಚಾರವಾಗಿದೆ. ಪ್ರಶಸ್ತಿಗೆ ಯಾರನ್ನು ಹಿಡಿದು ಅರ್ಜಿ ಹಾಕಿದರೆ ಸಿಗುತ್ತದೆ. ದುಡ್ಡು ಕೊಟ್ಟರೂ ಸಿಗುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಇವತ್ತು ಪ್ರಶಸ್ತಿ ಅನ್ನುವ ಪದ ನಿಧಾನವಾಗಿ ಅಪಮೌಲ್ಯಕ್ಕೆ ಹೋಗುತ್ತಿದೆ.
| ಸುಬ್ರಾಯ ಚೊಕ್ಕಾಡಿ, ಕವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net