ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಮಾತನಾಡಿದರು. ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಉಪಸ್ಥಿತರಿದ್ದರು.
ಪುತ್ತೂರು: ಹಬ್ಬಗಳ ಆಚರಣೆ ಸಂದರ್ಭದಲ್ಲಿ ಆಯಾ ಇಲಾಖೆಗಳಿಗೆ ಜವಾಬ್ದಾರಿಯಿದ್ದು, ಪೊಲೀಸ್ ಇಲಾಖೆ ಹೆಚ್ಚುವರಿಯಾಗಿ ಕ್ರಮ ಕೈಗೊಳ್ಳುತ್ತಿದೆ. ಮುನ್ನೆಚರಿಕೆಯ ದೃಷ್ಟಿಯಿಂದ ಹಳೆಯ ಪ್ರಕಣದಲ್ಲಿ ಭಾಗಿಯಾದವರು ಮತ್ತೆ ಅದನ್ನು ಪುನರಾವರ್ತಿಸಬಾರದೆಂಬ ಕಾರಣಕ್ಕೆ ಬಾಂಡ್ ಪಡೆಯಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಸ್ವಚ್ಛವಾಗಿರುವವರು ಬಾಂಡ್‌ಗಳಿಗೆ ಭಯಪಡುವ ಅಗತ್ಯವಿಲ್ಲ. ಬಾಂಡ್ ಪಡೆಯುವುದನ್ನು ಕಿರುಕುಳ ಎಂದು ಯಾರೂ ಪರಿಗಣಿಸಬಾರದು ಎಂದು ಪೊಲೀಸ್ ಉಪಾಽಕ್ಷಕ ಪ್ರಮೋದ್ ಕುಮಾರ್ ಹೇಳಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿಸಭೆಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಚೆಕ್‌ಪೋಸ್ಟ್ ಸ್ಥಾಪನೆ: ಬಾಂಡ್ ಪ್ರಕ್ರಿಯೆಯನ್ನು ಸ್ಥಳೀಯ ಮಟ್ಟಕ್ಕೆ ತರುವ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಮುಂದೆ ಇಡಲಾಗುವುದು. ನಿರ್ದಿಷ್ಟ ಅವಽಯಲ್ಲಿ ಅಹಿತಕರ ಘಟನೆ ನಡೆದಲ್ಲಿ ಮಾತ್ರ ಬಾಂಡ್ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹೊರ ರಾಜ್ಯದಿಂದ ಬರುವ, ಹೋಗುವ ವಾಹನಗಳ ಮೇಲೆ ನಿಗಾ ಇಡಲು ವಿವಿಧ ಕಡೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಠಾಣೆ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮಾತನಾಡಿ ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಾರ್ವಜನಿಕರು ಸಹಕಾರ ನೀಡಿದ್ದರಿಂದ ಸಮಸ್ಯೆಯಾಗಿಲ್ಲ. ವಾಹನಗಳು ಹೆಚ್ಚಾಗಿರುವ ಕಾರಣ ಸಂಚಾರ ದಟ್ಟಣೆ ಉಂಟಾಗಿದೆ. ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುತ್ತದೆ. ಬೈಪಾಸ್ ಇರುವ ಕಾರಣ ಪೇಟೆಯ ಒಳಗೆ ವಾಹನಗಳ ಒತ್ತಡ ಕಡಿಮೆಯಾಗಿದೆ ಎಂದರು.
ಉಪನಿರೀಕ್ಷಕರಾದ ಸುರೇಶ್, ಸುಹಾಸ್, ಸೇಸಮ್ಮ, ವಿವಿಧ ಸಮುದಾಯದ ರಝಾಕ್, ದಿನೇಶ್, ಇಬ್ರಾಹಿಂ, ಬಶೀರ್, ರೋಶನ್, ಮೌರೀಸ್ ಮಸ್ಕರೇನಿಯಸ್, ಲಕ್ಷ್ಮೀಪ್ರಸಾದ್, ಹರೀಶ್, ಇಸಾಕ್ ಮುಕ್ವೆ ಮತ್ತಿತರರು ಉಪಸ್ಥಿತರಿದ್ದರು.
ಬೇರೆ ಇಲಾಖೆಯ ಅಧಿಕಾರಿಗಳೂ ಇರಲಿ
ನಗರದಲ್ಲಿ ಪರವಾನಗಿ ಇಲ್ಲದ ಹಲವು ಅಂಗಡಿಗಳಿದ್ದು, ಅಪಾಯ ಆಗುವ ಮೊದಲು ಎಚ್ಚರ ವಹಿಸಬೇಕು. ನಾಯಿಗಳಿಂದ ಸಣ್ಣ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ. ನಗರಸಭೆ ಪಾರ್ಕಿಂಗ್ ವ್ಯವಸ್ಥೆಯಿಲ್ಲದಿದ್ದರೂ ಕಟ್ಟಡ ಕಟ್ಟಲು ಅನುಮತಿ ನೀಡುವುದರಿಂದ ಸಮಸ್ಯೆಯಾಗುತ್ತಿದೆ. ಬೃಹತ್ ಕಟೌಟ್‌ಗಳು ಗಾಳಿಗೆ ಬೀಳುವಂತಿವೆ. ಹಬ್ಬದ ಸಮಯದಲ್ಲಿ ವಿವಿಧ ವಿಚಾರಗಳು ಚರ್ಚೆಗೆ ಬರುವುದರಿಂದ ತಹಸೀಲ್ದಾರ್, ನಗರಸಭೆ, ಆರೋಗ್ಯ ಇಲಾಖೆ, ಮೆಸ್ಕಾಂ ಅಽಕಾರಿಗಳೂ ಸಭೆಯಲ್ಲಿ ಹಾಜರಿರುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬಂತು.
ತಪ್ಪುಗಳಿಗೆ ಕಟ್ಟುನಿಟ್ಟಿನ ಕ್ರಮವಾಗಲಿ
ಅಹಿತಕರ ಘಟನೆ ನಡೆಯದಂತೆ ಹಬ್ಬ ಆಚರಿಸಲಾಗುವುದು. ಗೋ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿರುವ ಹಲವರಿಗೆ ನೋಟಿಸ್ ನೀಡಲಾಗಿದೆ. ಹೆಚ್ಚುವರಿ ಅಽಕ್ಷಕರ ಕಚೇರಿಗೆ ತೆರಳಿ ಬಾಂಡ್ ನೀಡಬೇಕೆಂಬುದು ಸರಿಯಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಅವರಿಗೆ ಕಿರುಕುಳ ನೀಡುವುದು ಸರಿಯಲ್ಲ. ಕೆಲವು ಮಂದಿಗೆ ನ್ಯಾಯಾಲಯದಲ್ಲಿ ಅಂತಿಮ ಆದೇಶವಾದರೂ ಅವರಿಂದಲೂ ಬಾಂಡ್ ಪಡೆಯಲಾಗುತ್ತಿದೆ. ತಪ್ಪುಗಳಿಗೆ ಕಟ್ಟುನಿಟ್ಟಿನ ಕ್ರಮಗಳು ಆಗಬೇಕು. ಮಸೀದಿಗಳ ಮುಂದೆ ಸಿಬ್ಬಂದಿ ನೇಮಕ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.